ಹೆದ್ದಾರಿಗಳಲ್ಲಿ ಯದ್ವಾತದ್ವಾ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಎಎಸ್‌ಐಗೆ ಅಧಿಕಾರ

Published : Jul 08, 2017, 10:30 PM ISTUpdated : Apr 11, 2018, 12:53 PM IST
ಹೆದ್ದಾರಿಗಳಲ್ಲಿ ಯದ್ವಾತದ್ವಾ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಎಎಸ್‌ಐಗೆ ಅಧಿಕಾರ

ಸಾರಾಂಶ

ಹೆದ್ದಾರಿಗಳಲ್ಲಿ ಯಾವ ಪೊಲೀಸರೂ ಹಿಡಿಯುವುದಿಲ್ಲ ಎಂದು ಯದ್ವಾತದ್ವಾ ವಾಹನ ಚಾಲನೆ ಮಾಡುತ್ತೀರಾ? ಇನ್ಮುಂದೆ ನಿಮ್ಮ ಆಟ ನಡೆಯದು. ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಅಧಿಕಾರ ಹೆದ್ದಾರಿ ಗಸ್ತು ಪೊಲೀಸರಿಗೆ ದೊರೆತಿದೆ.

ಬೆಂಗಳೂರು (ಜು.08): ಹೆದ್ದಾರಿಗಳಲ್ಲಿ ಯಾವ ಪೊಲೀಸರೂ ಹಿಡಿಯುವುದಿಲ್ಲ ಎಂದು ಯದ್ವಾತದ್ವಾ ವಾಹನ ಚಾಲನೆ ಮಾಡುತ್ತೀರಾ? ಇನ್ಮುಂದೆ ನಿಮ್ಮ ಆಟ ನಡೆಯದು. ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಅಧಿಕಾರ ಹೆದ್ದಾರಿ ಗಸ್ತು ಪೊಲೀಸರಿಗೆ ದೊರೆತಿದೆ.
 
ಕೆಳಹಂತದ ಸಿಬ್ಬಂದಿ ವರ್ಗವನ್ನು ಆಡಳಿತಾತ್ಮಕವಾಗಿ ಮತ್ತಷ್ಟು ಶಕ್ತಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಈಗ ಹೆದ್ದಾರಿ ಗಸ್ತು ಪೊಲೀಸ್ ತಂಡದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರಿಗೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಅಧಿಕಾರ ನೀಡಿದ್ದಾರೆ.  ಹೀಗಾಗಿ ಇನ್ಮುಂದೆ ಬೆಂಗಳೂರು ನಗರದಂತೆ ಹೆದ್ದಾರಿಗಳಲ್ಲಿ ಕೂಡ ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ಪೊಲೀಸರ ಬಿಸಿ ತಟ್ಟಲಿದೆ. ಪಾನಮತ್ತ ಚಾಲನೆ, ಅತಿವೇಗದ ಚಾಲನೆ, ಚಾಲನಾ ಪರವಾನಗಿ ಹೊಂದಿಲ್ಲದ ಚಾಲನೆ ಹೀಗೆ ಸಂಚಾರ ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆದ್ದಾರಿ ಗಸ್ತು ಪೊಲೀಸರು ದಂಡ ವಿಧಿಸಲಿದ್ದಾರೆ. 
 
ಈಗಾಗಲೇ ಈ ಸಂಬಂಧ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಸುತ್ತೋಲೆ ಕಳುಹಿಸಿದ್ದಾರೆ. ಈ ಸೂಚನೆ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಗಸ್ತು ಪಡೆಯು ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಚಾರ ಠಾಣೆಗಳ ವ್ಯಾಪ್ತಿಗೊಳಪಡದ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಮೀರಿದವರ ಮೇಲೆ ಗಸ್ತು ಪೊಲೀಸರು ಕಣ್ಣಿಡಲಿದ್ದಾರೆ. ಈವರೆಗೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಪೊಲೀಸರು ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸುತ್ತಿದ್ದರು. ಈಗ ಹೊಸ ಆದೇಶವು ಗಸ್ತು ಪೊಲೀಸರಿಗೆ ಶಕ್ತಿ ನೀಡಿದೆ.
 
24 ತಾಸು ರಸ್ತೆಯಲ್ಲಿ ಗಸ್ತು ತಿರುಗಾಟಕ್ಕೆ ಮೀಸಲಾಗಿದ್ದ ಎಎಸ್‌ಐಗಳ ಕಾರ್ಯವು ಏಕತಾನತೆಯ ಕೆಲಸವಾಗಿತ್ತು. ಈಗ ಅವರಿಗೆ ಸಂಚಾರ ವಿಭಾಗದ ಕಾರ್ಯ ಹಂಚಿಕೆ ಮಾಡಿದ್ದರಿಂದ ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆಗೂ ಬ್ರೇಕ್ ಬೀಳಲಿದೆ. ಇದರಿಂದ ರಸ್ತೆ ಅಪಘಾತ ನಿಯಂತ್ರಣಕ್ಕೂ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮುನ್ನ ಎಎಸ್‌ಐ ಹಾಗೂ ಸ್ಟೇಷನ್ ರೈಟರ್‌ಗಳಿಗೆ ಸಣ್ಣ ಮಟ್ಟದ ಅಪರಾಧ ಕೃತ್ಯಗಳಲ್ಲಿ ಎಫ್‌ಐಆರ್ ದಾಖಲಿಸುವುದಲ್ಲದೆ ಆ ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವನ್ನು ಡಿಜಿಪಿ ನೀಡಿದ್ದರು. ಈಗ ಎರಡನೇ ಹಂತದಲ್ಲಿ ಎಎಸ್‌ಐಗಳಿಗೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡಿ ವಿಧಿಸುವ ಅಧಿಕಾರ ಹಂಚಿಕೆಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!