ಸಿದ್ಧಾರ್ಥ ಸಾವು ಆತ್ಯಹತ್ಯೆ: ವಿಧಿವಿಜ್ಞಾನ ಲ್ಯಾಬ್ ವರದಿ?| ಮುಂದೆ ತನಿಖಾಧಿಕಾರಿಗಳು ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತು ತನಿಖೆ ಚುರುಕುಗೊಳಿಸಲಿದ್ದಾರೆ
ಮಂಗಳೂರು[ಆ.26]: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವಿನ ಕುರಿತ ಗೊಂದಲಕ್ಕೆ ಕೊನೆಗೂ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ತೆರೆ ಎಳೆದಿದೆ. ಸಿದ್ಧಾರ್ಥ ಅವರದ್ದು ಆತ್ಮಹತ್ಯೆ ಎಂದು ಪ್ರಕರಣದ ತನಿಖಾಧಿಕಾರಿಗೆ ಸಲ್ಲಿಸಿದ ಎಫ್‌ಎಸ್‌ಎಲ್ ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕಳೆದ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಫೋರೆನ್ಸಿಕ್ ತಜ್ಞರ ಕೈಸೇರಿತ್ತು. ಬಳಿಕ ಅವರು ಅಂತಿಮ ವರದಿಯನ್ನು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದಾರೆ. ಈ ವರದಿ ಆಧಾರದಲ್ಲಿ ಸಿದ್ಧಾರ್ಥ ಅವರ ಸಾವು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ. ಜು.29ರಂದು ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಸಿದ್ಧಾರ್ಥ ಸಾವಿಗೀಡಾಗಿದ್ದರು. 2 ದಿನಗಳ ಬಳಿಕ ಶವ ಪತ್ತೆಯಾಗಿತ್ತು.
undefined
ಸಿದ್ಧಾರ್ಥ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ : ಹೇಗಾಯ್ತು ಸಾವು?
ಶವದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪರೀಕ್ಷಾ ವರದಿಯನ್ನು ಹೆಚ್ಚಿನ ಪರೀಕ್ಷೆಗೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸಿದ್ಧಾರ್ಥ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಅವರು ನೀರಿಗೆ ಬಿದ್ದು ಉಸಿರುಗಟ್ಟಿಸಾವಿಗೀಡಾದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೂ ಸಾವಿನ ಕುರಿತು ಯಾವುದೇ ಗೊಂದಲಗಳಿಗೆ ಆಸ್ಪದ ಮಾಡಿಕೊಡಬಾರದು ಎನ್ನುವ ಉದ್ದೇಶದಿಂದ ಅವರ ಮೃತದೇಹದ ಭಾಗಗಳನ್ನು ಹೆಚ್ಚಿನ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ಕಳುಹಿಸಿ ಕೊಡಲಾಗಿತ್ತು. ಈಗ ತನಿಖಾಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಎಫ್‌ಎಸ್‌ಎಲ್ ವರದಿಯಲ್ಲಿ ಸಿದ್ಧಾಥ್‌ರ್ ಸಾವಿನ ಬಗ್ಗೆ ಅನುಮಾನ ಮೂಡಿಸುವ ಅಂಶಗಳು ಎಲ್ಲೂ ಉಲ್ಲೇಖವಾಗಿಲ್ಲ ಎಂದು ಹೇಳಲಾಗಿದೆ.
ಸಾವಿನ ಕುರಿತ ಗೊಂದಲ ಪರಿಹಾರವಾದ ಬಳಿಕ ಇನ್ನು ಮುಂದೆ ತನಿಖಾಧಿಕಾರಿಗಳು ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತು ತನಿಖೆ ಚುರುಕುಗೊಳಿಸಲಿದ್ದಾರೆ.