
ಬೆಂಗಳೂರು (ಮಾ. 23): ಚಿಕ್ಕಮಗಳೂರಿನ ಜನಾಶೀರ್ವಾದ ಯಾತ್ರೆಯಲ್ಲಿ ತಮ್ಮ ವಿರುದ್ಧ ‘ಲೂಟಿ ರವಿ’ ಎಂದು ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಾನು ಲೂಟಿ ಹೊಡೆದಿದ್ದೇನೆ ಎಂಬುದಾಗಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನ ಕಾರ್ಯಕ್ರಮ ಭಾಷಣದ ವೇಳೆ ನಾನು ಲೂಟಿ ಹೊಡೆದಿದ್ದೇನೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜನರಿಗೆ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ನಾನು ಲೂಟಿ ಮಾಡಿಲ್ಲ. ಪ್ರತಿ ವರ್ಷ ಲೋಕಾಯುಕ್ತಕ್ಕೆ ಸಲ್ಲಿಸುವ ಆಸ್ತಿಗಳಿಂತ ಹೆಚ್ಚು ಆಸ್ತಿ ಹೊಂದಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಆಣೆ ಮಾಡುತ್ತೇನೆ. ಸಿದ್ದರಾಮಯ್ಯ ಮಾ.26ರಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಬರಲಿ ಎಂದು ಸವಾಲು ಹಾಕಿದರು.
ಎಮ್ಮೆ ಕಾಯುತ್ತಿದ್ದವರ ಆಸ್ತಿ ಬಹಿರಂಗಪಡಿಸುವೆ:
ಸಿದ್ದರಾಮಯ್ಯ ಅವರು ಕಾಗೆ ಕೂತಿದೆ ಎಂದು ಕಾರು ಬದಲಿಸಿದ್ದರು. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ಆಣೆ ಮಾಡಲು ಅಮಾವಾಸ್ಯೆ ಅಥವಾ ಹುಣ್ಣಿಮೆ ಆಗಬೇಕೆ ಎಂಬುದನ್ನು ನಿರ್ಧರಿಸಲಿ. ಈ ತಿಂಗಳ 26 ಹಾಗೂ 30, 31ರಂದು ಮೈಸೂರಿನಲ್ಲಿಯೇ ಇರುತ್ತೇನೆ. ಮುಖ್ಯಮಂತ್ರಿಗಳು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಎಮ್ಮೆ ಕಾಯುತ್ತಿದ್ದವರ ಆಸ್ತಿ ಈಗ ಎಷ್ಟಾಗಿದೆ ಎಂಬುದನ್ನು ಮೈಸೂರಿನಲ್ಲಿಯೇ ಬಹಿರಂಗಪಡಿಸುತ್ತೇನೆ. ಜತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.
ರಾಹುಲ್‌ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ಭೇಟಿ ವೇಳೆ ಶೃಂಗೇರಿ ಜಗದ್ಗುರುಗಳು ಹಿಂದು ಧರ್ಮದ ಜತೆ ನಡೆದರೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಸೂಕ್ಷ್ಮವಾಗಿ ಧರ್ಮ ಒಡೆಯುವ ಕೆಲಸ ಮಾಡಬೇಡಿ. ಅಭಿವೃದ್ಧಿ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಬೇಡಿ. ಹಿಂದೂ ಧರ್ಮದಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟಬೇಡಿ ಎಂಬ ಮಾತನ್ನು ಹೇಳಿದ್ದಾರೆ. ಅವರ ಮಾತನ್ನು ಶೃಂಗೇರಿಯಲ್ಲಿಯೇ ಬಿಟ್ಟು ಹೋಗದೆ ಮನಸ್ಸಿಗೆ ತೆಗೆದುಕೊಂಡು ಪಾಲಿಸಿ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿಕ್ಕಮಗಳೂರಿನ ಜನ ನನ್ನ ಅಜ್ಜಿಯನ್ನು ಗೆಲ್ಲಿಸಿದ್ದಾರೆ, ಅವರ ಋುಣ ಮರೆಯುವುದಿಲ್ಲ ಎಂದಿದ್ದಾರೆ. ನಿಮಗೆ ಸೋತಾಗ ಮಾತ್ರ ಚಿಕ್ಕಮಗಳೂರು ನೆನಪಾಗುತ್ತದೆಯೇ? ನಿಮ್ಮ ಸರ್ಕಾರ ನಮಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬಿಡಿಗಾಸು ಬಿಡುಗಡೆ ಮಾಡಲಿಲ್ಲ. ಎಂಜಿನಿಯರಿಂಗ್ ಕಾಲೇಜು ತಲೆ ಎತ್ತಲು ಬಿಡಲಿಲ್ಲ. ಇದೀಗ ರಾಜಕೀಯಕ್ಕಾಗಿ ಚಿಕ್ಕಮಗಳೂರಿನ ಜನ ನೆನಪಾದರೇ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.