ಬಿಜೆಪಿಯಲ್ಲಿ  ಇನ್ನೂ ಬಿಎಸ್‌ವೈ v/s ಈಶ್ವರಪ್ಪ

Published : Oct 14, 2017, 03:31 PM ISTUpdated : Apr 11, 2018, 12:39 PM IST
ಬಿಜೆಪಿಯಲ್ಲಿ  ಇನ್ನೂ ಬಿಎಸ್‌ವೈ v/s ಈಶ್ವರಪ್ಪ

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ರಾಜ್ಯ ಬಿಜೆಪಿ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಆರಂಭಿಸಲು ಸಜ್ಜಾಗುತ್ತಿರುವ ಮಧ್ಯೆಯೇ ಆಂತರಿಕ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ರಾಜ್ಯ ಬಿಜೆಪಿ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಆರಂಭಿಸಲು ಸಜ್ಜಾಗುತ್ತಿರುವ ಮಧ್ಯೆಯೇ ಆಂತರಿಕ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.

ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ಭಿನ್ನಾಭಿಪ್ರಾಯದ ಕೇಂದ್ರ ಬಿಂದುವಾಗಿರುವ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನಡುವೆ ಈಗಲೂ ಹೊಂದಾಣಿಕೆ ಸಾಧ್ಯವಾಗಿಲ್ಲ.

ತೋರಿಕೆಗೆ ಮಾತ್ರ ಎಂಬಂತೆ ಬಹಿರಂಗ ಸಭೆ ಸಮಾರಂಭಗಳಲ್ಲಿ ನಗು ನಗುತ್ತಲೇ ಕಾಣಿಸಿಕೊಳ್ಳುವ ಉಭಯ ನಾಯಕರ ನಡುವೆ ಈಗಲೂ ಆತ್ಮೀಯತೆ-ವಿಶ್ವಾಸದ ಮಾತಿಲ್ಲ. ಮೊದಲಿನ ಸಲುಗೆಯಿಲ್ಲ. ಒಳಗಿಂದೊಳಗೇ ಅಸಮಾಧಾನ ಬುಸುಗುಡುತ್ತಲೇ ಇದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಒಂದೇ ಮಾತಿನಲ್ಲಿ ಹೇಳಬಹುದಾದರೆ ಉಭಯ ನಾಯಕರಿಗೆ ಪರಸ್ಪರ ವಿಶ್ವಾಸ ಮೂಡುತ್ತಿಲ್ಲ. ಅಂತರ ದೊಡ್ಡದಾಗುತ್ತಲೇ ಸಾಗುತ್ತಿರುವುದು ರಾಜ್ಯ ಬಿಜೆಪಿಯ ಹಲವು ನಾಯಕರ ಚಿಂತೆಗೂ ಕಾರಣವಾಗಿದೆ. ಆದರೆ, ಇಬ್ಬರಿಗೂ ಹೇಳುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ.

ಪರಿಣಾಮ, ಈಶ್ವರಪ್ಪ ಅವರು ಪಕ್ಷದ ಕೋರ್ ಕಮಿಟಿ ಸೇರಿದಂತೆ ಪ್ರಮುಖ ಸಭೆ ಸಮಾರಂಭಗಳಿಗೆ ಆಗಾಗ ಗೈರು ಹಾಜರಾಗುವ ಮೂಲಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಹಾಗೆ ಗೈರು ಹಾಜರಾದ ನಂತರ ಅದಕ್ಕೊಂದು ಕಾರಣವನ್ನೂ ಮುಂದಿಟ್ಟು ಸಮರ್ಥಿಸಿಕೊಳ್ಳುತ್ತಾರೆ. ಭಾಗವಹಿಸಿದರೂ ಅನ್ಯಮನಸ್ಕರಾಗಿಯೇ ಇರುತ್ತಿದ್ದಾರೆ. ಪಕ್ಷದ ಇತರ ನಾಯಕರು ಯಡಿಯೂರಪ್ಪ ಅವರೊಂದಿಗೆ ಸುಗಮವಾಗಿ ಹೆಜ್ಜೆ ಹಾಕಿದರೂ ಅದು ಈಶ್ವರಪ್ಪ ಅವರಿಗೆ ಮಾತ್ರ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಇತ್ತೀಚಿನ ನಡವಳಿಕೆಗಳಿಂದ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.

ಶುಕ್ರವಾರ ಪಕ್ಷದ ಕೋರ್ ಕಮಿಟಿ ಸಭೆ ನಡೆಯುವುದು ಗೊತ್ತಿದ್ದರೂ ಈಶ್ವರಪ್ಪ ಅವರು ಗುರುವಾರ ರಾತ್ರಿಯೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. ಪೂರ್ವ ನಿಗದಿತ ಕಾರ್ಯಕ್ರಮಗಳಿರುವುದರಿಂದ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬ ಸಮಜಾಯಿಷಿ ಈಶ್ವರಪ್ಪ ಮತ್ತು ಪಕ್ಷದ ಇತರ ಮುಖಂಡರಲ್ಲಿ ಸದಾ ಸಿದ್ಧವಾಗಿಯೇ ಇರುತ್ತದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ಹುಟ್ಟುಹಾಕಿದ್ದ ಈಶ್ವರಪ್ಪ ಅವರು ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಇಡೀ ಸಂಘಟನೆಯನ್ನೇ ಕೈಬಿಟ್ಟಿದ್ದರೂ ಪಕ್ಷದಲ್ಲಿ ತಮಗೆ ಮೊದಲಿನ ಆದರ, ಗೌರವ ಸಿಗುತ್ತಿಲ್ಲ. ಈಗಲೂ ಪಕ್ಷದ ಪ್ರಮುಖ ತೀರ್ಮಾನಗಳನ್ನು ಏಕಪಕ್ಷೀಯವಾಗಿಯೇ ತೆಗೆದು ಕೊಳ್ಳಲಾಗುತ್ತಿದೆ. ಅಮಿತ್ ಶಾ ಅವರ ಸೂಚನೆಯನ್ನೂ ರಾಜ್ಯಾಧ್ಯಕ್ಷರು ಸರಿಯಾಗಿ ಪಾಲಿಸುತ್ತಿಲ್ಲ. ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ನೀಡಿದರೂ ಸ್ವತಂತ್ರವಾಗಿ ಸಮಾವೇಶಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಹಕಾರ ನೀಡುತ್ತಿಲ್ಲ ಎಂಬ ಅಳಲನ್ನು ಈಶ್ವರಪ್ಪ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಸ್ಥಳೀಯ ಶಿವಮೊಗ್ಗ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಂಬಂಧ ಭಿನ್ನಮತ ಉದ್ಭವಿಸಿದ್ದರೂ ನಂತರದ ದಿನಗಳಲ್ಲಿ ಖುದ್ದು ಅಮಿತ್ ಶಾ ಅವರೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೂ ಈಶ್ವರಪ್ಪ ಅವರಿಗೆ ಸಮಾಧಾನ ತಂದಿಲ್ಲ. ರಾಷ್ಟ್ರೀಯ ನಾಯಕರು ಟಿಕೆಟ್ ನೀಡಿದರೂ ಸ್ಥಳೀಯ ನಾಯಕರು ತಮ್ಮ ಸೋಲಿಗೆ ಪ್ರಯತ್ನಿಸಬಹುದೇನೋ ಎಂಬ ಆತಂಕ ಅವರನ್ನು ಬಿಡದೆ ಕಾಡುತ್ತಿದೆ ಎನ್ನಲಾಗಿದೆ.

ಆದರೆ, ಈಶ್ವರಪ್ಪ ಅವರ ಈ ಆತಂಕ ಮತ್ತು ಅಳಲನ್ನು ಯಡಿಯೂರಪ್ಪ ಆಪ್ತರು ಒಪ್ಪಿಕೊಳ್ಳುವುದಿಲ್ಲ. ಪಕ್ಷದ ಪ್ರಮುಖ ಸಭೆ ಸಮಾರಂಭಗಳ ಬಗ್ಗೆ ಮುಂಚಿತವಾಗಿಯೇ ಸಂದೇಶ ರವಾನಿಸಿದರೂ ತಪ್ಪಿಸಿಕೊಳ್ಳಲು ಏನಾದರೊಂದು ಕಾರಣ ಹುಡುತ್ತಾರೆ. ತೀರಾ ಅನಿವಾರ್ಯ ಎಂದಾಗ ಪಾಲ್ಗೊಳ್ಳುತ್ತಾರೆ. ಪ್ರಮುಖ ನಿರ್ಧಾರಗಳನ್ನು ಎಲ್ಲರೊಂದಿಗೆ ಚರ್ಚಿಸಿಯೇ ಕೈಗೊಳ್ಳಲಾಗುತ್ತದೆ. ಹಿಂದುಳಿದ ವರ್ಗಗಳ ಮೋರ್ಚಾ ಉಸ್ತುವಾರಿ ನೀಡಿದ ನಂತರ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ. ಅವರೇ ಕ್ರಿಯಾಶೀಲವಾಗದೆ ನಿಷ್ಕ್ರಿಯಗೊಂಡರೆ ಏನು ಮಾಡುವುದು ಎಂಬ ವಾದವನ್ನು ಮಂಡಿಸುತ್ತಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!