
ಬೆಂಗಳೂರು(ಆ.19): ಶಿವರಾಮಕಾರಂತ ಬಡಾವಣೆ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಹತ್ತು ದಿನಗಳ ಕಾಲಾವಕಾಶ ಕೋರಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಡಿನೋಟಿಫೀಕೇಷನ್ ಉರುಳಾಗುವ ಸಾಧ್ಯತೆ ಕಂಡು ಬರುತ್ತಿದೆ. ಬನಶಂಕರಿ ನಿವಾಸಿ ಅಯ್ಯಪ್ಪ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿದ್ದ ದೂರಿನ ಸಂಬಂಧ ಎರಡು ಎಫ್ಐಆರ್ ದಾಖಲಾಗಿದ್ದು ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ.
ಇಂದು 11 ಗಂಟೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದರೂ, ಬಿಎಸ್ವೈ ತನಿಖಾಧಿಕಾರಿ ಮುಂದೆ ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಇದೀಗ ವಕೀಲರನ್ನು ಎಸಿಬಿ ಮುಂದೆ ಕಳುಹಿಸಿರುವ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಲು ಹತ್ತು ದಿನಗಳ ಕಾಲಾವಕಾಶ ಕೋರಿದ್ದಾ.
ಶಿವರಾಮ ಕಾರಂತ್ ಬಡಾವಣೆ ನಿರ್ಮಾಣಕ್ಕಾಗಿ ಯಡಿಯೂರಪ್ಪ ಸರ್ಕಾರ 3500 ಎಕರೆ ಡಿನೋಟಿಫಿಕೇಶನ್ ಮಾಡಿದ್ದರು. ಇದರಲ್ಲಿ ಅಕ್ರಮವಾಗಿ 257 ಎಕರೆ ಭೂಮಿಯನ್ನು ಭೂ ಮಾಲೀಕರಿಗೆ ಹಿಂದಿರುಗಿಸಿ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂಬುದು ದೂರುದಾರ ಅಯ್ಯಪ್ಪ ಅವರ ಆರೋಪ. ಎಫ್ಐಆರ್ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳಾದ ಶಿವಶಂಕರ್ ರೆಡ್ಡಿ, ಆಂಥೋನಿ ರಾಜ್ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಎಸಿಬಿ ಎಫ್ಐಆರ್ ದಾಖಲು ಮಾಡುತ್ತಿದ್ದಂತೆ ಬಂಧನ ಭೀತಿಗೆ ಒಳಗಾಗಿರುವ ಬಿಎಸ್ವೈ ನಿರೀಕ್ಷಣಾ ಜಾಮೀನು ಸಲ್ಲಿಸಲು ಚಿಂತನೆ ಮಾಡಿದ್ದರು. ಇಂದು ವಕೀಲರನ್ನು ಎಸಿಬಿ ಮುಂದೆ ಕಳುಹಿಸಿರುವ ಬಿಎಸ್ವೈ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ ಎಂಬುವುದಾಗಿಯೂ ಸುವರ್ಣ ನ್ಯೂಸ್'ಗೆ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.