ಮನೆದೇವರ ದರ್ಶನವಿಲ್ಲದೆ ಯಡಿಯೂರಪ್ಪ ಪ್ರಮಾಣ| ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವ ಸ್ವಾಮಿಯ ದರ್ಶನ ಪಡೆಯದೇ ಪ್ರಮಾಣ ವಚನ a
ತುಮಕೂರು[ಜು.27]: ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಿದ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡದೆ, ತಮ್ಮ ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವ ಸ್ವಾಮಿಯ ದರ್ಶನ ಪಡೆಯದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ದಿಢೀರೆಂದು ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ತುಮಕೂರಿನ ಸಿದ್ಧಗಂಗಾ ಮಠ ಹಾಗೂ ತಮ್ಮ ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವರರ ದರ್ಶನ ಮಾಡಲು ಯಡಿಯೂರಪ್ಪಗೆ ಸಾಧ್ಯವಾಗಲಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಜೆಡಿಎಸ್ ಜೊತೆ ರಚಿಸಿದ ದೋಸ್ತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಹಾಗೂ 2007, 2008 ಮತ್ತು 2018ರಲ್ಲಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮುನ್ನ ಹಾಗೂ ಕೆಜೆಪಿ ಪಕ್ಷ ಸ್ಥಾಪನೆ ಸೇರಿದಂತೆ ಮಹತ್ವದ ನಿರ್ಣಯ ಕೈಗೊಳ್ಳುವ ಮೊದಲು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕ್ಯ ಸಿದ್ಧಗಂಗಾ ಶ್ರೀಗಳ ಆರ್ಶೀವಾದ ಪಡೆದು, ಎಡೆಯೂರಿಗೆ ತೆರಳಿ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ.
ಇಂದು ಭೇಟಿ ನಿರೀಕ್ಷೆ:
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಸಿದ್ಧಗಂಗೆ ಹಾಗೂ ಎಡೆಯೂರಿಗೆ ಭೇಟಿ ನೀಡಬಹುದೆಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದಾರೆ.