ವಿಧಾನಸೌಧ ಬಾಗಿಲು ಮುಚ್ಚುವಂತೆ ಸಿಎಂ ವಿರುದ್ಧ ಕಿಡಿ

By Web DeskFirst Published Oct 18, 2018, 11:11 AM IST
Highlights

ಉಪ ಚುನಾವಣೆ ಮುಗಿಯುವವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧದ ಬಾಗಿಲು ಮುಚ್ಚಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದ್ದಾರೆ.
 

ಬೆಂಗಳೂರು :  ಮೈತ್ರಿ ಸರ್ಕಾರದ ಸಚಿವರು, ಶಾಸಕರು ಜನರ ಸಮಸ್ಯೆಯನ್ನು ಆಲಿಸದೆ ಉಪ ಚುನಾವಣೆಯಲ್ಲಿ ತಲ್ಲೀನರಾಗಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ಮುಗಿಯುವವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧದ ಬಾಗಿಲು ಮುಚ್ಚಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದ್ದಾರೆ.

ನಗರದ ಫ್ರೀಡಂಪಾರ್ಕ್ನಲ್ಲಿ ಪಿಂಚಣಿಗೆ ಒತ್ತಾಯಿಸಿ ಅನುದಾನಿತ ಶಾಲಾ-ಕಾಲೇಜು ನೌಕರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅವರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ರಾಜ್ಯದಲ್ಲಿ 100ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜನರು ಸಂಕಷ್ಟದಲ್ಲಿದ್ದಾರೆ. ಆದರೂ ರಾಜ್ಯದ ಜನರ ಹಿತವನ್ನು ಸರ್ಕಾರ ಮರೆತಿದೆ. ಸಮ್ಮಿಶ್ರ ಸರ್ಕಾರದ ಸಚಿವರು, ಶಾಸಕರು ಉಪಚುನಾವಣೆಯಲ್ಲಿ ತಲ್ಲೀನವಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಪಚುನಾವಣೆ ಮುಗಿಯುವವರೆಗೆ ವಿಧಾನಸೌಧದ ಬಾಗಿಲು ಮುಚ್ಚಿಸುವುದು ಒಳ್ಳೆಯದು ಎಂದು ಹೇಳಿದರು.

ನಾನು ಯಾವುದೇ ಹೇಳಿಕೆ ನೀಡಿದರೂ ಅದಕ್ಕೆ ಪ್ರತಿ ಹೇಳಿಕೆ ನೀಡುವುದೇ ಮುಖ್ಯಮಂತ್ರಿಗಳ ಮತ್ತು ಸಚಿವರ ನಿತ್ಯ ಕಾಯಕವಾಗಿದೆ. ನಾವು ಪ್ರತಿಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮರೆತಿದೆ ಎಂದರು.

ಬಿಎಸ್‌ವೈ ಬೆಂಬಲ:

ಕರ್ನಾಟಕ ರಾಜ್ಯ ಅನುದಾನಿತ ವಿದ್ಯಾಸಂಸ್ಥೆಗಳ ಪಿಂಚಣಿ ವಂಚಿತ ನೌಕರರ ಸಂಘವು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ನಡೆಸಿದ ಅವರು, ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಎನ್ನುವ ತಾರತಮ್ಯವಿಲ್ಲದೇ 1987ರಿಂದ 1993ರವರೆಗಿನ ಸುಮಾರು 15 ಸಾವಿರ ನೌಕರರಿಗೆ ವೇತನ ಅನುದಾನ ಒದಗಿಸಲಾಯಿತು. ಆದರೆ ನೂತನ ಪಿಂಚಣಿ ಯೋಜನೆಯ ಅನುಷ್ಠಾನದಿಂದಾಗಿ ಇದೇ ಅವಧಿಯಲ್ಲಿ ಅನದಾನಕ್ಕೆ ಒಳಪಟ್ಟು ಈಗ ನಿವೃತ್ತರಾಗುವ ಈ ನೌಕರರು ಬರಿಗೈಲಿ ನಿವೃತ್ತಿ ಹೊಂದುವಂತಾಗಿದೆ. ಇಂತಹ ಸುಮಾರು ಅನುದಾನಿತ ವಿದ್ಯಾಸಂಸ್ಥೆಗಳ 40 ಸಾವಿರ ನೌಕರರು ಪಿಂಚಣಿ ಸೌಲಭ್ಯವಿಲ್ಲದೆ ಬೀದಿಗೆ ಬೀಳುವಂತಾಗಿರುವುದನ್ನು ಯಾವುದೇ ನಾಗರಿಕ ಸಮಾಜ ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಇತ್ತೀಚೆಗೆ ನಿವೃತ್ತರಾದ 1500ಕ್ಕೂ ಹೆಚ್ಚು ನೌಕರರಿಗೆ ಕೊನೆ ತಿಂಗಳ ಸಂಬಳ ಬಿಟ್ಟರೆ ಹೆಚ್ಚಿನ ಯಾವುದೇ ಪರಿಹಾರವೂ ದೊರೆತಿಲ್ಲ. ಇದು ನೌಕರರಿಗೆ ಸಿಗಬೇಕಾದ ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಈ ದೃಷ್ಟಿಯಿಂದ ಫ್ರೀಡಂಪಾರ್ಕ್ನಲ್ಲಿ ನಡೆದಿರುವ ನೌಕರರ ಹೋರಾಟವನ್ನು ಬಿಜೆಪಿ ಬೆಂಬಲಿಸಿದ್ದು, ಅವರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ, ನಿವೃತ್ತ ನೌಕರರಿಗೆ ಸಿಗಬೇಕಾದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿದ್ಯಾಸಂಸ್ಥೆಗಳ ನೌಕರರ ಭವಿಷ್ಯವೇ ಅನಿಶ್ಚಯತೆಯಲ್ಲಿರುವಂತಾಗಿರುವುದು ದುರದೃಷ್ಟದ ಸಂಗತಿ. ನಿವೃತ್ತಿಯ ನಂತರ ನೆಮ್ಮದಿಯ ಜೀವನ ನಡೆಸುವುದು ಈ ನೌಕರರ ಹಕ್ಕು. ಈ ಹಕ್ಕು ಉಲ್ಲಂಘನೆಯಾಗದಂತೆ ಗಮನಿಸಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ. ಆದ್ದರಿಂದ ಈ ನೌಕರರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

click me!