
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರವು ರಚನೆಯಾಗಿ ನೂರು ದಿನ ಕಳೆಯುತ್ತಿದ್ದರೂ ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಭಾವನೆಯೇ ಜನರಲ್ಲಿ ಇಲ್ಲವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ, ಜೆಡಿಎಸ್-ಕಾಂಗ್ರೆಸ್ ಮುಖಂಡರೇ ಕಚ್ಚಾಡಿಕೊಂಡು ಸಮ್ಮಿಶ್ರ ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿಯಲ್ಲ ಎಂದೂ ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸುತ್ತಿದೆ. ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಭಾವನೆಯೇ ಜನರಲ್ಲಿ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಇದ್ದು, ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು.
ಈ ಗೊಂದಲದ ಪರಿಣಾಮ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲದೇ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಮಯದಲ್ಲಿ ಪಕ್ಷದ ನಾಯಕರು ಯಾವುದೇ ಹೇಳಿಕೆಗಳನ್ನು ನೀಡಬಾರದು. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾ ಗುವುದಿಲ್ಲ. ಆದರೆ, ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿಯಲ್ಲ ಎಂದು ಹೇಳಿದರು.
ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರ ಎದುರಾದರೆ, ಉಳಿದ ಕಡೆ ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ಆದರೆ, ವಿಧಾನಸೌಧದಲ್ಲಿ ಸಚಿವರು ಲಭ್ಯವಾಗುತ್ತಿಲ್ಲ. ಜನರ ಸಂಕಷ್ಟಕೇಳುವವರೇ ಇಲ್ಲವಾಗಿದೆ. ಬರ ಮತ್ತು ಅತಿವೃಷ್ಟಿಪ್ರದೇಶದಲ್ಲಿಯೂ ಓಡಾಟ ನಡೆಸುತ್ತಿಲ್ಲ. ಅಭಿವೃದ್ಧಿ ಕಾರ್ಯವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೊಡಗು ಜಿಲ್ಲೆಯು ಅತಿವೃಷ್ಟಿಯಿಂದ ನಲುಗಿಹೋಗಿದೆ. ಅಪಾರ ಪ್ರಮಾಣದಲ್ಲಿ ಸಂತ್ರಸ್ತರಿಗೆ ಜನರು, ಮಠಾಧೀಶರು ಸೇರಿದಂತೆ ವಿವಿಧ ವರ್ಗದವರು ಸಹಾಯ ಹಸ್ತ ಚಾಚಿದ್ದಾರೆ ಎಂದರು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿಯಾಗಿ ಪರಿಶೀಲನೆ ನಡೆಸಿ ಒಂದು ಕೋಟಿ ರು. ಸರ್ಕಾರದಿಂದ ಮತ್ತು 7 ಕೋಟಿ ರು. ಸೈನಿಕರ ಕಲ್ಯಾಣ ನಿಧಿಯಿಂದ ಘೋಷಿಸಿದ್ದಾರೆ. ನಾವು ಕೂಡ ಹೆಚುವರಿ ಪರಿಹಾರ ನೀಡುವಂತೆ ಪ್ರಧಾನಿಗೆ ಮನವಿ ಮಾಡ ಲಾಗಿದೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಇದೇ ವೇಳೆ ಯಡಿಯೂರಪ್ಪ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.