ಭಾರೀ ಸಂಕಷ್ಟದಲ್ಲಿದೆ ಬಿಎಂಟಿಸಿ

By Web DeskFirst Published Apr 8, 2019, 8:38 AM IST
Highlights

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.  ಇತ್ತೀಚೆಗಷ್ಟೇ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಬಿಎಂಟಿಸಿ ತನ್ನ ಪಾಲಿನ ಹಣ ಪಾವತಿಸಿರಲಿಲ್ಲ. ಈಗ ನೌಕರರ ಸಹಕಾರ ಸಂಘಗಳಲ್ಲಿ ನೌಕರರು ಪಡೆದಿರುವ ಸಾಲದ ಕಂತಿನ ಹಣ ಬಾಕಿ ಉಳಿಸಿಕೊಂಡಿರುವುದು ಬಹಿರಂಗಗೊಂಡಿದೆ. 

 ಬೆಂಗಳೂರು :  ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ದ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿದೆಯೇ?

ಇಂತಹದೊಂದು ಪ್ರಶ್ನೆ ಹುಟ್ಟುಹಾಕುವ ಬೆಳವಣಿಗೆಗಳು ನಡೆದಿವೆ. ತೀರಾ ಇತ್ತೀಚೆಗಷ್ಟೇ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಬಿಎಂಟಿಸಿ ತನ್ನ ಪಾಲಿನ ಹಣ ಪಾವತಿಸಿರಲಿಲ್ಲ. ಈಗ ನೌಕರರ ಸಹಕಾರ ಸಂಘಗಳಲ್ಲಿ ನೌಕರರು ಪಡೆದಿರುವ ಸಾಲದ ಕಂತಿನ ಹಣ ಬಾಕಿ ಉಳಿಸಿಕೊಂಡಿರುವುದು ಬಹಿರಂಗಗೊಳ್ಳುವ ಮೂಲಕ ಈ ಪ್ರಶ್ನೆಗೆ ಇಂಬು ನೀಡುತ್ತಿದೆ.

ಬಿಎಂಟಿಸಿ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಸುಮಾರು 1.50 ಕೋಟಿ ಹಾಗೂ ಕಳೆದ 4 ತಿಂಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್‌ ಸಹಕಾರ ಸಂಘಕ್ಕೆ 4.50 ಕೋಟಿ ಮತ್ತು ಬೆಂಗಳೂರ ಮಹಾನಗರ ಸಾರಿಗೆ ನಿಗಮ ನೌಕರರ ಕ್ರೆಡಿಟ್‌ ಸಹಕಾರ ಸಂಘಕ್ಕೆ 1.50 ಕೋಟಿ ಸೇರಿ ಒಟ್ಟು ಸುಮಾರು 6 ಕೋಟಿ ಬಾಕಿ ಉಳಿಸಿಕೊಂಡಿದೆ. ಇದು ನಿಗಮದ ಆರ್ಥಿಕ ಸ್ಥಿತಿ ತೀರ ಬಿಗಡಾಯಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

ನೌಕರರಿಗೆ ಆರೋಗ್ಯ ಸೇವೆ ನೀಡಲು ಬಿಎಂಟಿಸಿಯು ನಗರದ 17 ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಕೆಲ ಆಸ್ಪತ್ರೆಗಳಿಗೆ ಸುಮಾರು 1.50 ಕೋಟಿ ಚಿಕಿತ್ಸಾ ವೆಚ್ಚ ಬಾಕಿ ಉಳಿಸಿಕೊಂಡಿರುವುದರಿಂದ ನೌಕರರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಸೇವೆ ನೀಡುವ ಒಪ್ಪಂದ ಮುಂದುವರಿಸಲು ನಿರಾಸಕ್ತಿ ತಳೆದಿವೆ. ಇದರ ಬೆನ್ನಲ್ಲೇ ನಿಗಮ, ನೌಕರರು ಸಹಕಾರಿ ಸಂಘಗಳಿಂದ ಪಡೆದಿರುವ ಸಾಲದ ಕಂತನ್ನು ಕಳೆದ ನಾಲ್ಕು ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ಇದು ನಷ್ಟದ ಹಳಿಯಲ್ಲಿರುವ ನಿಗಮದ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿರುವುದನ್ನು ತೋರುತ್ತದೆ.

ಬಡ್ಡಿಯೂ ಬಾಕಿ:

2017 ಮತ್ತು 2018ನೇ ಸಾಲಿನಲ್ಲಿ ಎರಡೂ ಸಹಕಾರ ಸಂಘಗಳಿಂದ 27.14 ಕೋಟಿ ಸಾಲದ ಕಂತಿನ ಹಣ ಬಾಕಿ ಉಸಿಕೊಂಡಿತ್ತು. ನೌಕರರ ಒತ್ತಡ ಹೆಚ್ಚಾದ್ದರಿಂದ ಕಳೆದ ಡಿಸೆಂಬರ್‌ನಲ್ಲಿ ಆ ಬಾಕಿ ಹಣ ಪಾವತಿಸಿದೆ. ಆದರೆ, ಆ ಬಾಕಿ ಹಣಕ್ಕೆ ಬಡ್ಡಿಯ ಮೊತ್ತ ಸುಮಾರು 2.10 ಕೋಟಿ ಇದುವರೆಗೂ ಪಾವತಿಸಿಲ್ಲ. ಇದರಿಂದ ಸಾಲ ಪಡೆದ ನೌಕರರಿಗೆ ಬಡ್ಡಿ ಹಣ ಪಾವತಿಸುವಂತೆ ಸಹಕಾರ ಸಂಘ ನೋಟಿಸ್‌ ನೀಡಿದೆ. ಪ್ರತಿ ತಿಂಗಳು ನೌಕರರ ವೇತನದಲ್ಲಿ ಸಾಲದ ಕಂತಿನ ಹಣ ಕಡಿತ ಮಾಡಿರುವ ಬಿಎಂಟಿಸಿ, ಸಕಾಲಕ್ಕೆ ಸಹಕಾರ ಸಂಘಗಳಿಗೆ ಪಾವತಿಸದೆ ವಿಳಂಬ ಮಾಡಿದೆ. ಇದೀಗ ಆ ಹಣಕ್ಕೆ ಬಡ್ಡಿಯನ್ನೂ ಪಾವತಿಸದೆ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ನೌಕರರಿಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ನೊಂದ ಬಿಎಂಟಿಸಿ ನೌಕರ ಯೋಗೇಶ್‌ ಗೌಡ ಹೇಳಿದರು.

ನಿಗಮದ ತಪ್ಪಿಗೆ ನೌಕರರಿಗೆ ನೋಟಿಸ್‌

ಪ್ರತಿ ತಿಂಗಳು ನೌಕರರ ವೇತನದಲ್ಲಿ ಸಾಲದ ಕಂತು ಕಡಿತ ಮಾಡಿಕೊಂಡಿರುವ ಬಿಎಂಟಿಸಿ, ಸಕಾಲಕ್ಕೆ ಸಹಕಾರ ಸಂಘಕ್ಕೆ ಕಂತು ಪಾವತಿಸದೆ ತಪ್ಪು ಮಾಡಿದೆ. ಹೀಗಿರುವಾಗ ಆ ಮೊತ್ತಕ್ಕೆ ಸಹಕಾರ ಸಂಘ ವಿಧಿಸಿರುವ ಬಡ್ಡಿ ಮೊತ್ತವನ್ನು ನಿಗಮವೇ ಪಾವತಿಸಬೇಕು. ಆದರೆ, ನಿಯಮದ ಪ್ರಕಾರ ಸಾಲ ಪಡೆದ ನೌಕರರಿಗೆ ಸಹಕಾರ ಸಂಘ ನೋಟಿಸ್‌ ನೀಡುತ್ತಿದೆ. ನಿಗಮದ ನಿರ್ಲಕ್ಷ್ಯಧೋರಣೆಯಿಂದ ನೌಕರರರು ನೋಟಿಸ್‌ ಕಿರುಕುಳ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ನೌಕರರು ಹಗಲು-ರಾತ್ರಿ ಎನ್ನದೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ಇಂತಹ ಕಿರಿಕಿರಿಗಳಿಂದ ಮಾನಸಿಕ ಆರೋಗ್ಯವೂ ಹೇಳಾಗಿ ಕರ್ತವ್ಯ ನಿರ್ವಹಿಸಲು ಹಿಂಸೆಯಾಗುತ್ತಿದೆ ಎನ್ನುತ್ತಾರೆ ನೌಕರರು.

ಮತದಾನದ ಹಕ್ಕು ನಿರಾಕರಣೆ

ನಿಗಮ ನಿಗದಿತ ಅವಧಿಯಲ್ಲಿ ಸಾಲದ ಹಣ ಪಾವತಿಸದಿರುವುದರಿಂದ ಸಾಲ ಪಡೆದ ನೌಕರರನ್ನು ಸುಸ್ತಿದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನದ ಹಕ್ಕು ಕಳೆದುಕೊಳ್ಳಬೇಕಾಯಿತು. ಪ್ರತಿ ತಿಂಗಳು ವೇತನ ಸಂದರ್ಭದಲ್ಲಿ ಸಾಲದ ಕಂತು ಹಾಗೂ ಅದರ ಬಡ್ಡಿ ಮೊತ್ತವನ್ನು ಕಡಿತ ಮಾಡಿಕೊಳ್ಳುವ ನಿಗಮ ಸಕಾಲಕ್ಕೆ ಪಾವತಿಸದ ಪರಿಣಾಮ ಈ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಚಾಲಕ ಕಂ ನಿರ್ವಾಹಕ ಚನ್ನಕೇಶವ ಹೇಳುತ್ತಾರೆ.

ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿದ್ದ ನೌಕರರ ಸಾಲದ ಕಂತಿನ ಮೊತ್ತವನ್ನು ಸಹಕಾರ ಸಂಘಗಳಿಗೆ ಪಾವತಿಸಲಾಗಿದೆ. ಇನ್ನು ಕಳೆದ ನಾಲ್ಕು ತಿಂಗಳಿಂದ ಬಾಕಿ ಇರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಪರಿಶೀಲಿಸಿ, ಸೂಕ್ತ ಕ್ರಮ ವಹಿಸಲಾಗುವುದು

-ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ.

ಸತತ ನಷ್ಟ: ಆದಾಯ ಕುಸಿತ

ಕಳೆದ ನಾಲ್ಕು ವರ್ಷಗಳಿಂದ ನಿಗಮ ನಷ್ಟಅನುಭವಿಸುತ್ತಿದೆ. ನೌಕರರ ವೇತನದಲ್ಲಿ ಕಡಿತ ಮಾಡುವ ಸಾಲದ ಕಂತಿನ ಹಣವನ್ನು ನಿಗಮದ ನಿರ್ವಹಣೆಗೆ ಬಳಸಿಕೊಳ್ಳುವುದರಿಂದ ಸಕಾಲಕ್ಕೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ 100 ಕೋಟಿ ವಿಶೇಷ ಅನುದಾನ ನೀಡಿತ್ತಾದರೂ ಅದು ನೌಕರರ ಪಿಂಚಣಿ, ಗ್ರಾಚ್ಯುಯಿಟಿ ಬಾಕಿ ಪಾವತಿಗೆ ಸರಿದೂಗಿತು. ನಿಗಮದ ಸಾಲದ ಮೊತ್ತವೇ ಸುಮಾರು 1 ಸಾವಿರ ಕೋಟಿ ದಾಟಿದೆ. ರಾಜ್ಯ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದರೆ ಮಾತ್ರ ನಷ್ಟದ ಹಳಿಯಲ್ಲಿರುವ ನಿಗಮವನ್ನು ಮೇಲೆತ್ತಲು ಸಾಧ್ಯ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವರದಿ :  ಮೋಹನ ಹಂಡ್ರಂಗಿ

click me!