ಖೋಟಾ ನೋಟು ಮುದ್ರಿಸುತ್ತಿದ್ದ ಇಬ್ಬರು ಬಿಎಂಟಿಸಿ ಬಸ್‌ ಚಾಲಕರು!

By Web DeskFirst Published May 4, 2019, 8:21 AM IST
Highlights

ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಕ್ಷಾಂತರ ಮೌಲ್ಯದ ನಕಲಿ ನೋಟುಗಳನ್ನು ಇವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬೆಂಗಳೂರು :  ಎರಡು ಸಾವಿರ ಮತ್ತು ಐದುನೂರು ಮುಖ ಬೆಲೆಯ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಮುಂದಾಗಿದ್ದ ಇಬ್ಬರು ಬಿಎಂಟಿಸಿ ಚಾಲಕರು ಸೇರಿ ಮೂವರು ಯಲಹಂಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 80.31 ಲಕ್ಷ ಮೌಲ್ಯದ ಖೋಟಾ ನೋಟುಗಳು, ಖೋಟಾ ನೋಟು ತಯಾರಿಕೆಗೆ ಬಳಸುತ್ತಿದ್ದ ಕಂಪ್ಯೂಟರ್‌, ಪ್ರಿಂಟರ್‌ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ರಾಯಚೂರು ಲಿಂಗನಸೂರು ಮೂಲದ ಬೊಮ್ಮನಹಳ್ಳಿ ನಿವಾಸಿ ಸೋಮನಗೌಡ (38), ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಿರಣ್‌ ಕುಮಾರ್‌(24) ಹಾಗೂ ನಂಜೇಗೌಡ (32) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ರಾಮಕೃಷ್ಣ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮನಗೌಡ ಹಾಗೂ ನಂಜೇಗೌಡ ಬಿಎಂಟಿಸಿಯ ಒಂದೇ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಮತ್ತೊಬ್ಬ ಆರೋಪಿ ಕಿರಣ್‌ ಚನ್ನರಾಯಪಟ್ಟಣದಲ್ಲಿ ಫೋಟೊಗ್ರಾಫರ್‌ ಆಗಿದ್ದ.

ಎರಡು ವರ್ಷದ ಹಿಂದೆ ಸೋಮನಗೌಡ ಚಿತ್ರದುರ್ಗಕ್ಕೆ ಹೋಗಿದ್ದ ವೇಳೆ ರಾಮಕೃಷ್ಣನ ಪರಿಚಯವಾಗಿತ್ತು. ಸೋಮನಗೌಡ ಬೆಂಗಳೂರಿಗೆ ಬಂದ ಬಳಿಕವೂ ರಾಮಕೃಷ್ಣನ ಜತೆ ಸಂಪರ್ಕದಲ್ಲಿದ್ದ. ಒಂದು ಲಕ್ಷ ನೀಡಿದರೆ ಎರಡು ಲಕ್ಷ ಖೋಟಾ ನೋಟು ನೀಡುವುದಾಗಿ ಹೇಳಿದ್ದ. ಹಣದ ಆಸೆಗೆ ಬಿದ್ದ ಸೋಮನಗೌಡ, ರಾಮಕೃಷ್ಣನಿಗೆ ಒಂದು ಲಕ್ಷ ಅಸಲಿ ನೀಡಿ, ಎರಡು ಲಕ್ಷ ಖೋಟಾ ನೋಟು ಪಡೆದಿದ್ದ. ನಂತರ ಖೋಟಾ ನೋಟನ್ನು ಅಸಲಿ ನೋಟು ಎಂದು ನಂಬಿಸಿ ಬೇರೆಯವರಿಗೆ ನೀಡಿದ್ದ.

ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಸೋಮನಗೌಡ ಊರಿನಲ್ಲಿದ್ದ ತನ್ನ ಜಮೀನು ಮಾರಾಟ ಮಾಡಿ ರಾಮಕೃಷ್ಣಗೆ 7.5 ಲಕ್ಷ ಹಣ ನೀಡಿದ್ದ. ಇದಕ್ಕೆ ಪ್ರತಿಯಾಗಿ ರಾಮಕೃಷ್ಣ 15 ಲಕ್ಷ ಖೋಟಾ ನೋಟು ನೀಡುವಂತೆ ಹೇಳಿದ್ದ. ಹಣ ನೀಡಿ ಕೆಲ ತಿಂಗಳಾದರೂ ರಾಮಕೃಷ್ಣ ಹದಿನೈದು ಲಕ್ಷ ರು.ಗಳ ಖೋಟಾ ನೋಟು ನೀಡಿರಲಿಲ್ಲ. ಈ ಮಧ್ಯೆ ರಾಮಕೃಷ್ಣ, ಸೋಮನಗೌಡಗೆ ಖೋಟಾ ನೋಟ ತಯಾರಿ ಬಗ್ಗೆ ಹೇಳಿಕೊಟ್ಟಿದ್ದ. ಅದರಂತೆ ಆರೋಪಿ ಸೋಮನಗೌಡ ಮೂರು ತಿಂಗಳಿಂದ ಖೋಟಾ ನೋಟು ತಯಾರು ಮಾಡಲು ಪ್ರಾರಂಭಿಸಿದ್ದ. ಬಿಎಂಟಿಸಿ ಚಾಲಕ ನಂಜೇಗೌಡ ಹಾಗೂ ಫೋಟೋಗ್ರಾಫರ್‌ ಕಿರಣ್‌ಗೆ ಹಣದ ಆಮಿಷವೊಡ್ಡಿ ಕೃತ್ಯಕ್ಕೆ ಬಳಸಿಕೊಂಡಿದ್ದ.

ಏ.26ರಂದು ಬಂಧಿತರು ಕೋಗಿಲು ಕ್ರಾಸ್‌ಬಳಿ ಖೋಟಾ ನೋಟು ಚಲಾವಣೆಗೆ ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮಾಹಿತಿ ಮೇರೆಗೆ ದಾಳಿ ನಡೆಸಿದ ಯಲಹಂಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಖೋಟಾ ನೋಟು ದಂಧೆ ಬೆಳಕಿಗೆ ಬಂದಿದೆ.

ಇನ್ನು ಖೋಟಾನೋಟು ದಂಧೆಯಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬಿಎಂಟಿಸಿಯ ಇಬ್ಬರು ನೌಕರರನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಬಿಎಂಟಿಸಿ ಘಟಕ 4ರ ಚಾಲಕ ನಂಜೇಗೌಡ ಹಾಗೂ ಚಾಲಕ ಕಂ ನಿರ್ವಾಹಕ ಸೋಮನಗೌಡ ಕರ್ತವ್ಯ ನಿರ್ವಹಿಸುತ್ತಿದ್ದರು.

click me!