
ಬೆಂಗಳೂರು : ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಮೆಟ್ರೊ ಮುಷ್ಕರ ಮರುಜೀವ ಪಡೆದುಕೊಂಡಿದೆ. ಮೆಟ್ರೊ ನೌಕರರ ಸಂಘಕ್ಕೆ ಮಾನ್ಯತೆ, ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಟ್ರೊ ನೌಕರರು ಜೂ.4 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ನಿಯಮದ ಪ್ರಕಾರ 14 ದಿನ ಮುಂಚಿತಾಗಿ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ, ಹೈಕೋರ್ಟ್‌ಗೆ ಮುಷ್ಕರದ ನಿರ್ಧಾರದ ಕುರಿತು ಲಿಖಿತ ಮಾಹಿತಿ ನೀಡಲಾಗಿದೆ. ಬಿಎಂಆರ್‌ಸಿಎಲ್ ನೌಕರರು ಬೇಡಿಕೆ ಈಡೇರುವವರೆಗೂ ಮೆಟ್ರೊ ಸೇವೆಗೆ ಹಾಜರಾಗುವುದಿಲ್ಲ.
ಅಂದು ಮೆಟ್ರೊ ಸೇವೆ ಸ್ಥಗಿತಗೊಳಿಸಿ, ಹೋರಾಟವನ್ನು ತೀವ್ರಗೊಳಿಸಲಾಗುವುದು. ಈ ಬಾರಿ ಬೇಡಿಕೆ ಈಡೇರಿಸು ವವರೆಗೂ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲು ನೌಕರರ ಸಂಘ ನಿರ್ಧರಿಸಿದೆ ಎಂದು ಬಿಎಂಆರ್ ಸಿಎಲ್ ಎಂಪ್ಲಾಯೀಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯ ನಾರಾಯಣಮೂರ್ತಿ ತಿಳಿಸಿದ್ದಾರೆ. ನೌಕರರ ಸಮಸ್ಯೆಗಳನ್ನು ಪರಸ್ಪರ ಕುಳಿತು ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು.
ಅದಕ್ಕಾಗಿ 3 ಮಂದಿ ಆಡಳಿತ ಮಂಡಳಿ ಸದಸ್ಯರು ಹಾಗೂ 4 ಮಂದಿ ಬಿಎಂ ಆರ್‌ಸಿಎಲ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರ ಸಮಿತಿ ರಚಿಸಿತ್ತು. ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಈ ಸಮಿತಿ ವಾರದಲ್ಲಿ ಎರಡು ಬಾರಿ ಸಭೆ ನಡೆಸಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿ, 30 ದಿನಗಳ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾ.22 ಕ್ಕೆ ನಡೆಸಲು ಉದ್ದೇಶಿದ್ದ ಮೆಟ್ರೊ ರೈಲು ಬಂದ್ ಹೋರಾಟವನ್ನು ಸಂಘ ಹಿಂದಕ್ಕೆ ಪಡೆದಿತ್ತು.
ಆದರೆ, ಮಾತುಕತೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರಕ್ಕೆ ಇಳಿಯಲು ನೌಕರರ ಸಂಘ ನಿರ್ಧರಿಸಿದೆ. ಆಡಳಿತ ಮಂಡಳಿ ಧೋರಣೆ ಖಂಡಿಸಿ ಮತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ. ನ್ಯಾಯಾಲಯವು ನೀಡಿದ್ದ ಗಡುವಿನಲ್ಲಿ ನಿಗಮದ ಆಡಳಿತ ಮಂಡಳಿ ಯಾವುದೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ.
ಈಗ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನೌಕರರ ಸಮಸ್ಯೆಗಳು ಹಾಗೆಯೇ ಉಳಿದಿದ್ದು, ನ್ಯಾಯಯುತ ಬೇಡಿಕೆ ಈಡೇರಿಸಲು ಆಗ್ರಹಿಸಿ ಹೋರಾಟ ಅನಿವಾರ್ಯವಾಗಿದೆ ಎಂದು ಸೂರ್ಯ ನಾರಾಯಣಮೂರ್ತಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.