ಲೋಕಾಯುಕ್ತ ಕಚೇರಿಯಲ್ಲಿ ಚೂರಿ ಇರಿತಕ್ಕೆ ಬಿಜೆಪಿಯೆ ಕಾರಣ : ಕಾಂಗ್ರೆಸ್ ನಾಯಕನ ಆರೋಪ

By Suvarna Web DeskFirst Published Mar 11, 2018, 8:19 AM IST
Highlights

ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎನ್ನುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ಕಾನೂನು-ಸುವ್ಯವಸ್ಥೆ ಹೇಗಿತ್ತೆಂದುನೋಡಿಕೊಳ್ಳಲಿ.

ಬೆಂಗಳೂರು(ಮಾ.11): ಲೋಕಾಯುಕ್ತರಿಗೆ ಚೂರಿ ಇರಿದ ವ್ಯಕ್ತಿಯ ತಲೆಯಲ್ಲಿ ದ್ವೇಷ, ಅಸೂಯೆ ತುಂಬಿದ ಮಾನಸಿಕ ಸ್ಥಿತಿ ಸೃಷ್ಟಿಗೆ ಬಿಜೆಪಿಯವರೇ ಕಾರಣ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶಾದ್ಯಂತ ದ್ವೇಷ, ಅಸೂಯೆ ಹರಡಿಬಿಟ್ಟಿದ್ದಾರೆ.

ಜನರಿಗೆ ತಪ್ಪು ಸಂದೇಶ ನೀಡಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಪರಿಣಾಮಕ್ಕೊಳಗಾಗಿ ಕೆಲವರು ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಾರೆ ಎನಿಸುತ್ತಿದೆ ಎಂದು ಹೇಳಿದರು. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎನ್ನುತ್ತಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ಕಾನೂನು-ಸುವ್ಯವಸ್ಥೆ ಹೇಗಿತ್ತೆಂದು ನೋಡಿಕೊಳ್ಳಲಿ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಕರ್ನಾಟಕ ಗೂಂಡಾರಾಜ್ಯ ಆಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಕಾಲದಲ್ಲಿ ರೇವ್ ಪಾರ್ಟಿ, ಸಚಿವರ ಚುಂಬನಗಳ ದೃಶ್ಯ ಹೊರಬಂದಿದ್ದವು. ಇದಕ್ಕಿಂತ ನಾಚಿಕೆ ಇನ್ನೇನಿದೆ. ರಾಜ್ಯದಲ್ಲಿ ನಡೆದಿರುವ 23 ಕೊಲೆಗಳಲ್ಲಿ 14 ಹಿಂದುಗಳ ನಡುವೆಯೇ ನಡೆದಿದೆ. ಉಳಿದವು ವೈಯಕ್ತಿಕ ಕಾರಣಕ್ಕೆ ನಡೆದಿದೆ. ಸತ್ಯ ಮುಚ್ಚಿಟ್ಟು ತಪ್ಪು ಸಂದೇಶ ತಲುಪಿಸುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ ಎಂದರು.

click me!