
ಚೆನ್ನೈ(ಜು.8): ಆಧಾರ್ ಗುರುತಿನ ಚೀಟಿಯನ್ನು ದೇಶದ ಜನರ ನಿತ್ಯ ಬದುಕಿನ ಮೂಲಾಧಾರವಾಗಿ ಪರಿವರ್ತಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಪರಿಣಾಮ ನೋಡುತ್ತಿದೆ.
ಇದೀಗ ಆಧಾರ್ ಕಡ್ಡಾಯ ಎಂಬುದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಗಣ್ಯ ವ್ಯಕ್ತಿಗಳ ಭೇಟಿಗೂ ಆಧಾರ್ ಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ಹೌದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಆಧಾರ್ ಕಡ್ಡಾಯ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕ ಹೇಳಿರುವುದು ಅಚ್ಚರಿ ಮೂಡಿಸಿದೆ.
ಜುಲೈ 9ರಂದು ಚೆನ್ನೈನಲ್ಲಿ ಅಮಿತ್ ಷಾ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಪತ್ರಕರ್ತರು, ಪಾಸ್ ಪಡೆಯಲು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಯ ವಿವರ ಅಥವಾ ಚಾಲನಾ ಲೈಸನ್ಸ್ ಸಂಖ್ಯೆಯನ್ನು ನೀಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ತಮಿಳುನಾಡು ಬಿಜೆಪಿ ಘಟಕ ಈ ವಿವರಗಳನ್ನು ಕೇಳಿದ್ದು, ಪಾಸ್‍ಗಾಗಿ ಅರ್ಜಿ ನಮೂನೆ ಭರ್ತಿ ಮಾಡಿಕೊಡುವ ವೇಳೆ ಈ ವಿವರಗಳನ್ನೂ ಕಡ್ಡಾಯಪಡಿಸಲಾಗಿದೆ ಎನ್ನಲಾಗಿದೆ.
ಈ ಅರ್ಜಿಯ ಜೊತೆಗೆ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಲಗತ್ತಿಸುವಂತೆ ಸೂಚಿಸಲಾಗಿದೆ. ಚೆನ್ನೈನ ವಿಜಿಪಿ ಗೋಲ್ಡನ್ ಬೀಚ್ ರೆಸಾರ್ಟ್‍ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷರು ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಸುದ್ದಿ ಮಾಡಲು ತೆರಳುವ ಪತ್ರಕರ್ತರಿಗೆ ವಾಹನಸಂಖ್ಯೆ, ಸಂಸ್ಥೆಯ ಹೆಸರು, ಸಂಪಾದಕರ ಹೆಸರು ಮತ್ತಿತರ ಮಾಹಿತಿ ಮೊದಲೇ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.