ಇಂದು ಗೌರ್ನರ್‌ಗೆ ಬಿಜೆಪಿಯಿಂದ ದೂರು : ಯಾರ ವಿರುದ್ಧ?

By Web DeskFirst Published Sep 21, 2018, 7:30 AM IST
Highlights

ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ರಾಜದ್ರೋಹ ಆರೋಪದಡಿ ಪ್ರಕರಣ ದಾಖಲಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದು,  ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲಿದ್ದಾರೆ. 

ಬೆಂಗಳೂರು :  ದಂಗೆ ಏಳಬೇಕು ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯಿಂದ ಕ್ರುದ್ಧರಾಗಿರುವ ಬಿಜೆಪಿ ನಾಯಕರು, ಅವರ ವಿರುದ್ಧ ರಾಜದ್ರೋಹ ಆರೋಪದಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ತೀವ್ರ ಖಂಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥೆ ವಿರುದ್ಧ ನಕ್ಸಲರು ಮಾತ್ರ ದಂಗೆಗೆ ಕರೆ ನೀಡುತ್ತಿದ್ದರು. ಈಗ ಸಂವಿಧಾನಬದ್ಧ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದಂಗೆಗೆ ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯು ಭಾರತೀಯ ದಂಡೆ ಸಂಹಿತೆ 124(ಎ) ಪರಿಚ್ಛೇದದಡಿ ರಾಜದ್ರೋಹವಾಗುತ್ತದೆ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

ಹಾಸನದಲ್ಲಿ ಬೆಳಗ್ಗೆ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರ ಮನೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ನುಗ್ಗಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸವಾಗಿದೆ. ಆದರೆ ಮುಖ್ಯಮಂತ್ರಿಗಳೇ ಪ್ರಚೋದನಾತ್ಮಕ ಹೇಳಿಕೆ ನೀಡಿದರೆ ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ. ವಿಪಕ್ಷ ನಾಯಕರ ನಿವಾಸಕ್ಕೆ ಕಾರ್ಯಕರ್ತರು ದಾಳಿ ಘಟನೆಯಿಂದ ಪೊಲೀಸ್‌ ವ್ಯವಸ್ಥೆ ಸತ್ತಿದೆಯೇ ಬದುಕಿದೆಯೇ ಎನ್ನುವಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕಿಡಿಕಾರಿದರು.

ಬಿಜೆಪಿ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳ ವಿರುದ್ಧ ಹೋರಾಡಿದೆ. ಮುಖ್ಯಮಂತ್ರಿಗಳ ಇಂತಹ ಧಮ್ಕಿಗಳಿಗೆ ನಾವು ಬಗ್ಗುವುದಿಲ್ಲ. ಸಂವಿಧಾನ ವಿರೋಧಿ ಹೇಳಿಕೆ ನೀಡಿ ರಾಜ್ಯದಲ್ಲಿ ಅಶಾಂತ ಪರಿಸ್ಥಿತಿ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಕಾರಣರಾಗಿದ್ದಾರೆ. ತಕ್ಷಣವೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ದಂಗೆ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ರಾಜದ್ರೋಹ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ವಿಚಾರದಲ್ಲಿ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಅಲ್ಲದೆ, ಈ ಘಟನೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೇಳುತ್ತೇವೆ ಎಂದು ಅಶೋಕ್‌ ಹೇಳಿದರು.


ಯಡಿಯೂರಪ್ಪನನ್ನು ಕೊಲ್ಲಲು ಬಂದಿದ್ದರು

ಗೋವಿಂದ ಕಾರಜೋಳ ಮಾತನಾಡಿ, ಸಂವಿಧಾನದ ಪದವಿಯಲ್ಲಿರುವ ಮುಖ್ಯಮಂತ್ರಿಗಳು ವಿವೇಚನೆಯಿಂದ ಮಾತನಾಡಬೇಕು. ಮುಖ್ಯಮಂತ್ರಿಗಳ ದಂಗೆ ಹೇಳಿಕೆಯಿಂದ ಪ್ರಚೋದನೆಗೊಂಡ ಕಾಂಗ್ರೆಸ್‌ ಗೂಂಡಾಗಳು ಯಡಿಯೂರಪ್ಪನವರ ಮನೆಗೆ ನುಗ್ಗಿದ್ದರು. ಆ ವೇಳೆ ಅಲ್ಲಿ ನಮ್ಮ ಪಕ್ಷದ ನಾಲ್ಕೈದು ಶಾಸಕರಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಶಾಸಕರಿಲ್ಲದಿದ್ದರೆ ಯಡಿಯೂರಪ್ಪನವರ ಮೇಲೆ ಹಲ್ಲೆ ನಡೆಸಿ ಆ ಗೂಂಡಾಗಳು ಕೊಂದುಹಾಕುತ್ತಿದ್ದರು ಎಂದು ಕಿಡಿಕಾರಿದರು.

ಇನ್ನೂ ವಿರೋಧ ಪಕ್ಷದವರ ಮನೆಗೆ ಗೂಂಡಾಗಳು ದಾಳಿ ನಡೆಸಿದಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಇದರಿಂದ ರಾಜ್ಯದಲ್ಲಿ ಪೊಲೀಸ್‌ ಇಲಾಖೆಯ ಜೀವಂತಿಕೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ತಕ್ಷಣವೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಐಪಿಸಿ 153ರಡಿ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಡಿಜಿಪಿ ಅವರಿಗೆ ಒತ್ತಾಯಿಸುತ್ತೇನೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿಯೂ ಇಂತಹ ಉದ್ಧಟತನದ ಹೇಳಿಕೆ ನೀಡಿರಲಿಲ್ಲ ಎಂದು ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಪಕ್ಷದ ಶಾಸಕರ ಮೇಲೆ ವಿಶ್ವಾಸವಿಲ್ಲದೆ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಇದರಿಂದಲೇ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದು, ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ನಡೆಸಿದ ಕಾಂಗ್ರೆಸ್‌ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪುಟ್ಟಸ್ವಾಮಿ ಒತ್ತಾಯಿಸಿದರು.

click me!
Last Updated Sep 21, 2018, 7:30 AM IST
click me!