ಮಾರ್ಚ್ ಮೊದಲ ವಾರ ಬಿಜೆಪಿಯಿಂದ ರಕ್ಷಾ ಯಾತ್ರೆ

By Suvarna Web DeskFirst Published Feb 24, 2018, 11:09 AM IST
Highlights

ರಾಜ್ಯದ ಕರಾವಳಿ ಭಾಗದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಆ ಭಾಗದಲ್ಲಿ ಮಾರ್ಚ್ ಮೊದಲ ವಾರ ದಲ್ಲಿ ಜನರಕ್ಷಾ ಯಾತ್ರೆ ಹಮ್ಮಿಕೊಳ್ಳುತ್ತಿರುವ ರೀತಿಯಲ್ಲೇ ಬೆಂಗಳೂರಿನಲ್ಲೂ ಅದೇ ವೇಳೆ ರಕ್ಷಾಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಆ ಭಾಗದಲ್ಲಿ ಮಾರ್ಚ್ ಮೊದಲ ವಾರ ದಲ್ಲಿ ಜನರಕ್ಷಾ ಯಾತ್ರೆ ಹಮ್ಮಿಕೊಳ್ಳುತ್ತಿರುವ ರೀತಿಯಲ್ಲೇ ಬೆಂಗಳೂರಿನಲ್ಲೂ ಅದೇ ವೇಳೆ ರಕ್ಷಾಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ನಲಪಾಡ್‌ನ ಗೂಂಡಾ ಕೃತ್ಯ, ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕನ ದಬ್ಬಾಳಿಕೆ ಮತ್ತು ಶಾಸಕ ಸೋಮಶೇಖರ್ ಬೆಂಬಲಿಗರು ನಡೆಸಿದ್ದಾರೆನ್ನಲಾದ ದೌರ್ಜನ್ಯ ಸೇರಿದಂತೆ ಇತರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಬಿಜೆಪಿ ಮುಂದಾಗಿದೆ.

ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಈ ರಕ್ಷಾಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರವನ್ನು ಪ್ರತಿನಿಧಿಸುವ ಮೂವರು ಸಂಸದರು, ಶಾಸಕರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ಯಾತ್ರೆಯ ಉಸ್ತುವಾರಿ ವಹಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 3ರಿಂದ 6ರವರೆಗೆ ಕರಾವಳಿ ಭಾಗದಲ್ಲಿ ಜನರಕ್ಷಾ ಯಾತ್ರೆ ನಡೆಯಲಿದೆ. ಕರಾವಳಿ ಭಾಗದಲ್ಲಿ ಯಾತ್ರೆ ನಡೆದ ಬಳಿಕ ಬೆಂಗಳೂರಿನಲ್ಲಿ ರಕ್ಷಾ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ನಾಯಕರ ದಬ್ಬಾಳಿಕೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಆಯೋಜಿಸ ಲಾಗಿದೆ. ಪ್ರತಿ ದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಹಲವು ಹಿಂದೂಪರ ಕಾಯಕರ್ತರ ಹತ್ಯೆಗಳು ನಡೆಯುತ್ತಿವೆ. ಅಲ್ಲದೇ, ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರ ದೌರ್ಜನ್ಯ ಹೆಚ್ಚಳವಾಗಿದೆ. ನಿರಂತರವಾಗಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತಿದೆ. ಹೀಗಾಗಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಜತೆಗೆ ಸರ್ಕಾರವನ್ನು ಎಚ್ಚರಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿಕೊಂಡಿವೆ.

ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರದ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರ ದೇವಾಲಯದಿಂದ ರಕ್ಷಾ ಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ. ಮಾ.15ರೊಳಗೆ ಯಾತ್ರೆಯನ್ನು ಮುಗಿಸುವ ಆಲೋಚನೆ ಮಾಡಲಾಗಿದೆ. ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಕರೆತರುವ ಉದ್ದೇಶ ಬಿಜೆಪಿ ನಾಯಕರಿಗಿದೆ.

click me!