
ಬೆಂಗಳೂರು (ಅ.23): ವಿಧಾನಸಭಾ ಚುನಾವಣೆಯನ್ನು ಉತ್ತರ ಪ್ರದೇಶ ಮಾದರಿಯಲ್ಲಿ ನಡೆಸುವ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ ಈಗ ಪರಿವರ್ತನಾ ಯಾತ್ರೆಗೆ ಕೇರಳ ಮಾದರಿಯನ್ನು ಆಯ್ದುಕೊಂಡಿದೆ. ಈ ಮಧ್ಯೆ ಮತ್ತೆ ದಲಿತರತ್ತ ದೃಷ್ಟಿ ಹಾಯಿಸಿರುವ ಬಿಜೆಪಿ ದಲಿತರ ಮನೆಗಳಲ್ಲಿ ವಾಸ್ತವ್ಯದ ಯೋಜನೆ ರೂಪಿಸಿದೆ.
2018 ರ ವಿಧಾನಸಭಾ ಚುನಾವಣೆಯನ್ನು ಉತ್ತರ ಪ್ರದೇಶ ಮಾದರಿಯಲ್ಲೇ ನಡೆಸಬೇಕು ಎಂಬ ತೀರ್ಮಾನವನ್ನು ಕೇಂದ್ರೀಯ ಬಿಜೆಪಿ ಈಗಾಗಲೇ ತೆಗೆದುಕೊಂಡಿದೆ. ಈ ಮಧ್ಯೆ ನವೆಂಬರ್ 2ರಿಂದ ಆರಂಭವಾಗುವ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಯಶಸ್ವಿಗೊಳಿಸಲು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇದಕ್ಕೆ ಸ್ಪೂರ್ತಿಯಾಗಿದ್ದು ಕೇರಳದ ಜನರಕ್ಷಾ ಯಾತ್ರೆ. ಜನರಕ್ಷಾ ಯಾತ್ರೆಯಲ್ಲಿ ಒಂದೊಂದು ದಿನ ಒಬ್ಬೊಬ್ಬ ಫೈರ್ ಬ್ರಾಂಡ್ ನಾಯಕರನ್ನು ಪಾದಯಾತ್ರೆ ಮಾಡಿಸಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಕರ್ನಾಟಕದಲ್ಲೂ ಕೂಡಾ ಅದೇ ಪ್ಲಾನ್ ಯಥಾವತ್ ಅನುಷ್ಠಾನವಾಗಲಿದೆ. ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಗೋವಾ ಸಿಎಂ ಮನೋಹರ್ ಪರಿಕ್ಕರ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್, ಉಮಾಭಾರತಿ ಮತ್ತು ವಿವಿಧ ರಾಜ್ಯಗಳ ಪ್ರಭಾವಿ ಬಿಜೆಪಿ ಅಧ್ಯಕ್ಷರುಗಳು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ದಲಿತರ ಮನೆಗಳಲ್ಲಿ ಉಪಹಾರ ಸೇವಿಸಿ, ಅವರನ್ನೂ ಸತ್ಕರಿಸಿದ್ದ ಬಿಜೆಪಿ ಮತ್ತೆ ಈಗ ದಲಿತ ಸಮುದಾಯದತ್ತ ದೃಷ್ಟಿ ಹಾಯಿಸಿದೆ. ದಲಿತರ ಮನೆಗಳಲ್ಲಿ ವಾಸ್ತವ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಇದೇ ತಿಂಗಳ 29ರಿಂದ ವಾಸ್ತವ್ಯ ಆರಂಭವಾಗಬೇಕಿತ್ತಾದರೂ ಅನಾರೋಗ್ಯದ ಕಾರಣದಿಂದ ನವೆಂಬರ್ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ವಾಸ್ತವ್ಯ ಆರಂಭವಾಗಲಿದ್ದು, ಪರಿವರ್ತನಾ ಯಾತ್ರೆಯ ಮಧ್ಯೆ ಸಮಯಾವಕಾಶ ದೊರೆತಾಗ ವಾಸ್ತವ್ಯ ಮಾಡಲು ಚಿಂತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.