
ಬೆಂಗಳೂರು(ಅ. 03): ತಮಿಳುನಾಡಿಗೆ 3 ಟಿಎಂಸಿ ನೀರು ಬಿಡಲು ರಾಜ್ಯ ಸರಕಾರ ಕೈಗೊಂಡಿದೆ ಎನ್ನಲಾದ ನಿರ್ಧಾರಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಬಿಜೆಪಿ ತಾಕೀತು ಮಾಡಿದೆ. ಕುಡಿಯಲಷ್ಟೇ ಕಾವೇರಿ ನೀರನ್ನು ಬಳಸುತ್ತೇವೆ ಎಂದು ವಿಧಾನ ಮಂಡಲದಲ್ಲಿ ಸದನ ಕೈಗೊಂಡಿದ್ದ 'ನಿರ್ಣಯ'ಕ್ಕೆ ಸರಕಾರ ಬದ್ಧವಾಗಿರಬೇಕೆಂದು ಬಿಜೆಪಿ ಮುಖಂಡ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಇಂದು ನಡೆದ ಸದನನಾಯಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ಮುಖಂಡರು, ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನ್ನ ನಿಲುವನ್ನು ಸಡಿಲಗೊಳಿಸಬಾರದೆಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ರಾಜ್ಯ ಸರಕಾರವು ಎರಡು ಕಾರಣಗಳಿಗಾಗಿ ತಮಿಳುನಾಡಿಗೆ ನೀರು ಬಿಡಲು ಸರಕಾರ ನಿರ್ಧರಿಸಿದೆ ಎನ್ನಲಾಗಿದೆ. ರಾಜ್ಯದ ರೈತರ ಬೆಳೆಗಳಿಗೆ ನೀರು ಹರಿಸಬೇಕಾದರೆ ತಮಿಳುನಾಡಿಗೆ ನೀರು ಬಿಡಬೇಕಾದ್ದು ಅನಿವಾರ್ಯವಾಗಿದೆ. ಜೊತೆಗೆ, ಸುಪ್ರೀಂಕೋರ್ಟ್'ನ ಆದೇಶ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡುವುದು ಅನಿವಾರ್ಯ ಎಂದು ಸದನನಾಯಕರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ತಮಿಳುನಾಡಿಗೆ ನೀರು ಬಿಡಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿರುವುದು ಬಹುತೇಕ ಖಚಿತವೆಂಬ ಸೂಚನೆಯಾಗಿದೆ.
ನಿರ್ಣಯದಲ್ಲಿ ಮಾರ್ಪಾಡು:
ಜಲಾಶಯಗಳಲ್ಲಿ ಇರುವ ನೀರು ಕುಡಿಯಲಷ್ಟೇ ಬಳಸುತ್ತೇವೆ ಎಂದು ವಿಧಾನಮಂಡಲದ ಅಧಿವೇಶನದಲ್ಲಿ ಸದನ ಕೈಗೊಂಡಿದ್ದ 'ನಿರ್ಣಯ'ದಲ್ಲಿ ಸ್ವಲ್ಪ ಮಾರ್ಪಾಡು ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಕಾವೇರಿ ಕೊಳ್ಳದಲ್ಲಿ ಒಳಹರಿವಿನಿಂದ ಸಂಗ್ರಹವಾಗಿರುವ ಹೆಚ್ಚುವರಿ ನೀರನ್ನು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ರೈತರಿಗೆ ಬಿಡಬೇಕೆಂಬ ಅಂಶವನ್ನು ಸೇರಿಸಲು ಸರಕಾರ ಯೋಜಿಸಿದೆ.
ಆದರೆ, ನಮ್ಮ ರಾಜ್ಯದ ಬೆಳೆಗಳಿಗೆ ಮಾತ್ರ ನೀರು ಬಿಡುತ್ತೇವೆ ಎಂದು ನಿರ್ಣಯ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.