
ವಿಧಾನಸಭೆ : ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದನ್ನು ಇಲ್ಲಿ ಮಾತ್ರ ಹೇಳುತ್ತಿಲ್ಲ. ನಿಮ್ಮ ಮೋದಿಗೆ ಮುಖಾಮುಖಿ ಹೇಳಿದ್ದೇನೆ. ಬೇಕಿದ್ದರೆ ಸಾಕ್ಷಿಗೆ ಅನಂತಕುಮಾರ್ ಕೂಡ ಇದ್ದಾರೆ.’ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸದನದಲ್ಲಿ ಹೇಳಿದ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ ಪರಿಯಿದು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ತಮ್ಮ ಮಾತಿಗೆ ಆಕ್ಷೇಪಿಸಿ ವ್ಯಾಪಕ ಭ್ರಷ್ಟಾಚಾರ ಎಸಗಿರುವ ರಾಜ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಆಗ ನಾವು ಹೊಸ ಬಜೆಟ್ ಮಂಡಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದಾಗ ಮಾರುತ್ತರ ನೀಡಿದ ಸಿದ್ದರಾಮಯ್ಯ, ಬಿಜೆಪಿ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಈ ಮಾತನ್ನು ನಾನು ನಿಮ್ಮ ಮುಂದೆ ಅಷ್ಟೇ ಅಲ್ಲ, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಹೇಳಿದ್ದೇನೆ. ಮೈಸೂರಿನ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದ ಅವರಿಗೆ, ನಿಮ್ಮ ಪಕ್ಷದ ರಾಜ್ಯ ನಾಯಕರು ನಿಮಗೆ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಭ್ರಮೆ ಮೂಡಿಸಲು ಯತ್ನಿಸುತ್ತಿದ್ದಾರೆ. ಅದನ್ನು ನಂಬಬೇಡಿ. ಏಕೆಂದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದೆ ಎಂದರು.
ಇದಕ್ಕೆ ಬಿಜೆಪಿ ಸದಸ್ಯರು ಹೋ.. ಎಂದಾಗ ಮೋದಿ ಮೈಸೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅನಂತಕುಮಾರ್ ಬಳಿ ನಿಮ್ಮ ಕಾರ್ಯಕ್ರಮದಲ್ಲಿ ನನಗೆ ಭಾಷಣ ಮಾಡಲು ಅವಕಾಶ ಮಾಡಿಕೊಡಿ, ಕೆಲವೊಂದು ವಿಷಯ ಹೇಳುವುದಿದೆ ಎಂದಿದ್ದೆ. ಅನಂತಕುಮಾರ್ ಈ ಮಾತನ್ನು ಮೋದಿ ಅವರಿಗೇ ಹೇಳಲು ಮುಂದಾದರು. ಆಗ ನಾನೇ ಖುದ್ದಾಗಿ ಹೋಗಿ ಇವರ ಮಾತುಗಳನ್ನೆಲ್ಲಾ ನಂಬಬೇಡಿ. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಇದಕ್ಕೆ ಅನಂತಕುಮಾರ್ ಸಾಕ್ಷಿ ಎಂದು ಹೇಳಿದರು.
ಅಷ್ಟಕ್ಕೇ ಸುಮ್ಮನಾಗದೆ, ಮೋದಿಗೆ ಏನೂ ಗೊತ್ತಿಲ್ಲ ಪಾಪ. ರಾಜ್ಯ ಬಿಜೆಪಿಯವರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ. ನಿಮ್ಮ ಬುದ್ಧಿ ಅವರಿಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಮುಖಂಡರನ್ನು ಛೇಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.