ಕಪ್ಪ ಡೈರಿ: ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

By Web DeskFirst Published Mar 26, 2019, 8:28 AM IST
Highlights

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‌ಗೆ 1800 ಕೋಟಿ ರು. ಕಪ್ಪ ನೀಡಿದ್ದಾರೆ ಎಂಬ ಆರೋಪದ ಡೈರಿ ವಿಚಾರದ ಕುರಿತು ಅಪಪ್ರಚಾರ ನಡೆಸಲಾಗಿದ್ದು, ಕಾಂಗ್ರೆಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.

ಬೆಂಗಳೂರು (ಮಾ. 26): ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‌ಗೆ 1800 ಕೋಟಿ ರು. ಕಪ್ಪ ನೀಡಿದ್ದಾರೆ ಎಂಬ ಆರೋಪದ ಡೈರಿ ವಿಚಾರದ ಕುರಿತು ಅಪಪ್ರಚಾರ ನಡೆಸಲಾಗಿದ್ದು, ಕಾಂಗ್ರೆಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸೋಮವಾರ ಚುನಾವಣಾ ಆಯೋಗಕ್ಕೆ ತೆರಳಿ ದೂರು ನೀಡಿದರು. ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಳ್ಳು ಪ್ರಚಾರ ಕೈಗೊಳ್ಳಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ನಾಯಕರಿಗೆ ಹಣ ನೀಡಲಾಗಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ.

ಯಡಿಯೂರಪ್ಪ ಹೆಸರಿಗೆ ಮಸಿ ಬಳಿಯುವ ಕುತಂತ್ರ ಮಾಡಲಾಗಿದೆ. ಕಾಂಗ್ರೆಸ್ ಮಾಡಿರುವ ಆರೋಪವು ಸತ್ಯಕ್ಕೆ ದೂರವಾದುದು ಎಂದು ದೂರಿನಲ್ಲಿ ಹೇಳಲಾಗಿದೆ. ಡೈರಿ ಕುರಿತು ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಕ್ರಮ ಜರುಗಿಸಬೇಕು. ವೈಯಕ್ತಿಕ ನಿಂದನೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಮಾಡಬಾರದು ಎಂದು ನಿರ್ದೇಶನ ನೀಡಬೇಕು. ನಕಲಿ ಡೈರಿಯನ್ನು ಇಟ್ಟುಕೊಂಡು ಬೆದರಿಕೆ ತಂತ್ರ ಅನುಸರಿಸದಂತೆ ಸೂಚಿಸಿ ಎಂದು ಮನವಿ ಮಾಡಲಾಗಿದೆ.

ಸುರ್ಜೇವಾಲಾ ಅವರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ಕೇಂದ್ರ ನಾಯಕರಿಗೆ ಹಣ ನೀಡಲಾಗಿದೆ ಎಂಬುದಾಗಿ ಡೈರಿಯಲ್ಲಿ ನಮೂದಿಸಲಾಗಿದೆ ಎಂದು ಆರೋಪಿಸಿದ್ದರು. ಇದು ಸತ್ಯಕ್ಕೆ ದೂರವಾದುದು. ಆದಾಯ ತೆರಿಗೆ ಇಲಾಖೆ ಸಹ ಇದು ಅಸಲಿ ಡೈರಿಯಲ್ಲ ಎಂದಿದೆ. ಹೀಗಾಗಿ ಅದೊಂದು ನಕಲಿ ಡೈರಿ ಎಂದು ಸಂಶಯ ಇಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

click me!