
ನವದೆಹಲಿ (ಡಿ.15): ಗುಜರಾತ್ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಗುರುವಾರ ಮುಕ್ತಾಯಗೊಂಡಿದೆ. ದೇಶದ ಭವಿಷ್ಯದ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಈ ಚುನಾವಣೆಯಲ್ಲಿ, 22 ವರ್ಷದ ಆಡಳಿತ ವಿರೋಧಿ ಅಲೆಯ ಹೊರತಾಗ್ಯೂ ಬಿಜೆಪಿ ಭಾರಿ ಜಯ ಸಾಧಿಸಲಿದೆ.
ಚೇತರಿಕೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಸೋಲು ಅನುಭವಿಸಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದಲ್ಲದೆ, ಕಳೆದ ತಿಂಗಳೇ ಮುಕ್ತಾಯಗೊಂಡ ಹಿಮಾಚಲ ಪ್ರದೇಶದಲ್ಲೂ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಗೆಲುವಿನ ಮೆಟ್ಟಿಲೇರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಎಲ್ಲ ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಗೆಲುವಿನ ಅಂಕಿ ನೀಡಿರುವ ಕಾರಣ ಡಿ.18 ರಂದು ನಡೆಯಲಿರುವ ಎರಡೂ ರಾಜ್ಯಗಳ ಮತ ಎಣಿಕೆಯಲ್ಲಿ ಫಲಿತಾಂಶ ಇದಕ್ಕಿಂತ ಭಿನ್ನವಾಗಿ ಬರಲಿಕ್ಕಿಲ್ಲ ಎಂಬುದು ರಾಜಕೀಯ ತಜ್ಞರು ಹಾಗೂ ಸಮೀಕ್ಷಾ ತಜ್ಞರ ವಿಶ್ಲೇಷಣೆಯಾಗಿದೆ. ಈ ಸಮೀಕ್ಷೆಗಳಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದ್ದು, ಡಿ.18 ರ ಫಲಿತಾಂಶದ ಘೋಷಣೆ ಬಳಿಕ ಮುಂದೆ ಚುನಾವಣೆ ಎದುರಿಸಲಿರುವ ಕರ್ನಾಟಕದತ್ತ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವತ್ತ ದೃಷ್ಟಿ ಹರಿಸುವುದು ನಿಚ್ಚಳವಾಗಿದೆ.
ಇದೇ ವೇಳೆ, ಕೆಲವೇ ಕೆಲವು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಶತಾಯ ಗತಾಯ ಪಕ್ಷದ ಸರ್ಕಾರವನ್ನು ಉಳಿಸಿಕೊಳ್ಳುವತ್ತ ಸಂಪೂರ್ಣ ಗಮನ ಹರಿಸಲಿದೆ ಎಂಬುದು ಕೂಡ ಅಷ್ಟೇ ಸತ್ಯ. ಹೀಗಾಗಿ ಎರಡೂ ಪಕ್ಷಗಳ ‘ಫೋಕಸ್’ ಇನ್ನು ಕರ್ನಾಟಕ ಆಗಲಿದೆ ಎಂಬುದು ನಿರ್ವಿವಾದ. ಅಡ್ಡಿಗಳನ್ನು ಮೆಟ್ಟಿ ನಿಲ್ಲಲಿರುವ ಬಿಜೆಪಿ: ಕಾಂಗ್ರೆಸ್ ಪಕ್ಷವು ಗುಜರಾತ್‌ನಲ್ಲಿ ಈ ಸಲ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನವೋತ್ಸಾಹದಿಂದ ಕಣಕ್ಕಿಳಿದಿದೆ. ಅವರು ಅಧ್ಯಕ್ಷರಾಗುವ ಗುಂಗಿನಲ್ಲಿ ಉತ್ಸಾಹದಿಂದ ಇಡೀ ರಾಜ್ಯ ಸುತ್ತಿ ಪಕ್ಷದ ಅಸ್ತಿತ್ವ ಮರುಸ್ಥಾಪಿಸಲು ಅವಿರತ ಶ್ರಮ ಪಟ್ಟಿದ್ದಾರೆ. ಇದೇ ವೇಳೆ ರಾಹುಲ್‌ಗೆ ಸಾಥ್ ನೀಡಿದ್ದು ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಹಾಗೂ ಹಿಂದುಳಿದ ವರ್ಗದ ನಾಯಕ ಅಲ್ಪೇಶ್ ಠಾಕೂರ್ ಎಂಬ ತ್ರಿಮೂರ್ತಿಗಳು. ಈ ಜಾತಿ ಮತ ಸಮೀಕರಣವು ಕಾಂಗ್ರೆಸ್‌ಗೆ ಅನುಕೂಲ ತರಬಹುದು. ಬಿಜೆಪಿಗೆ ಇದು ಸವಾಲಾಗಲಿದೆ ಎಂದು ಭಾವಿಸಲಾಗಿತ್ತು. ಇನ್ನು 22 ವರ್ಷದ ಆಡಳಿತ ವಿರೋಧಿ ಅಲೆ, ಮೋದಿ ಅವರು ದಿಲ್ಲಿಗೆ ಹೋದ ನಂತರ ಪಕ್ಷದಲ್ಲಿನ ಕಚ್ಚಾಟ, ನೋಟು ಅಪನಗದೀಕರಣದ ದುಷ್ಪರಿಣಾಮ ಹಾಗೂ ಏಕಾಏಕಿ ವ್ಯಾಪಾರಿಗಳ ಮೇಲೆ ಜಿಎಸ್‌ಟಿ ಪದ್ಧತಿ ಹೇರಿಕೆಯು ಬಿಜೆಪಿಗೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ಗುಜರಾತ್‌ನವರೇ ಆಗಿರುವ ಕಾರಣ ಇಲ್ಲಿ ಅವರ ಮೋಡಿ ನಡೆದಿರಬಹುದು. ಜಾತಿ ಸಮೀಕರಣದಲ್ಲಿ ಯಶಸ್ವಿಯಾದರೂ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಬಿಂಬಿಸದೇ ಹೋಗಿದ್ದು ಬಿಜೆಪಿ ನಾಗಾಲೋಟಕ್ಕೆ ಕಾರಣವಾಗಬಹುದು. ಎಲ್ಲ ಅಡ್ಡಿಗಳನ್ನೂ ಬಿಜೆಪಿ ಮೆಟ್ಟಿ ನಿಲ್ಲಬಹುದು ಎಂದು ಮತದಾನೋತ್ತರ ಸಮೀಕ್ಷೆಯಲ್ಲಿನ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಅಂಕಿ-ಅಂಶಗಳು ಬಿಜೆಪಿ ಪರ: ಇನ್ನು ಮತದಾನೋತ್ತರ ಅಂಕಿ ಅಂಶಗಳು ಕೂಡ ಬಿಜೆಪಿ ಪರವಾಗಿಯೇ ಇವೆ. ಮತದಾನೋತ್ತರ ಸಮೀಕ್ಷೆಯಲ್ಲಿ ‘ಚಾಣಕ್ಯ’ ಸಂಸ್ಥೆಯ ಸಮೀಕ್ಷೆಯು ಬಿಜೆಪಿಗೆ ಗರಿಷ್ಠ 135 ಸ್ಥಾನ ನೀಡಿದೆ. ಕಾಂಗ್ರೆಸ್ ಗೆ ಸಮೀಕ್ಷೆಯಲ್ಲಿ ಪ್ರಾಪ್ತಿಯಾದ ಗರಿಷ್ಠ ಸ್ಥಾನಗಳು 82 (ಝೀ ನ್ಯೂಸ್ ಸಮೀಕ್ಷೆ ಪ್ರಕಾರ). ಹೀಗಾಗಿ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೋಡಿ ಮತದಾರರ ಮನ ಗೆಲ್ಲಲು ಈ ಬಾರಿಯೂ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.