
ಬೆಂಗಳೂರು : ಬಿಜೆಪಿಯು ಕುದುರೆ ವ್ಯಾಪಾರಕ್ಕೆ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಕೇಸರಿ ಪಕ್ಷದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯ ಅವರ ಈ ಆರೋಪವನ್ನು ಸಾರಾಸಗಟು ತಳ್ಳಿಹಾಕಿದ್ದಾರೆ.
‘ಯಾವುದೇ ಅತೃಪ್ತರೊಂದಿಗೆ ನಾವು ಸಂಪರ್ಕದಲ್ಲಿಲ್ಲ’ ಎಂದು ಯಡಿ ಯೂರಪ್ಪ ಹೇಳಿದ್ದಾರೆ. ‘ಸಿದ್ದರಾಮ ಯ್ಯ ಬ್ಲೇಮ್‌ಗೇಮ್ ಮಾಡುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರೆ, ‘ಕಾಂಗ್ರೆಸ್‌ನಲ್ಲಿ ಇರುವ ಕತ್ತೆ, ಕುದುರೆ, ಆನೆಗಳು ಯಾರು ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು. ಕುದುರೆಯನ್ನು ಏರಲಾರದವನು ಧೀರನೂ ಅಲ್ಲ, ಶೂರನೂ ಅಲ್ಲ’ ಎಂದು ಸದಾನಂದಗೌಡ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ನಕಾರ: ರಮೇಶ್ ಜಾರಕಿಹೊಳಿ ಸೇರಿ ಕಾಂಗ್ರೆಸ್‌ನ ಯಾವುದೇ ಅತೃಪ್ತರ ಜೊತೆ ನಾವು ಸಂಪರ್ಕದಲ್ಲಿಲ್ಲ. ಸದ್ಯಕ್ಕೆ ಸರ್ಕಾರ ರಚನೆ ಅಸಾಧ್ಯ ಮಾತು. ರಮೇಶ್ ಜಾರಕಿ ಹೊಳಿ ಜತೆ ಚರ್ಚಿಸಲಾಗಿದೆ ಎಂಬುದೆಲ್ಲ ಬರೀ ಊಹಾಪೋಹ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾವು ಕಾಂಗ್ರೆಸ್‌ನ ಅತೃಪ್ತ ಶಾಸಕರ ಜತೆಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ’ ಎಂದು ತಿಳಿಸಿದರು. ಇದಲ್ಲದೆ, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನಾನು ಭೇಟಿಯಾಗ ಬೇಕಿತ್ತು.ಆದರೆ ಅವರು ಗುಜರಾತ್‌ನಿಂದ ಹಿಂತಿರುಗಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಅನ್ಯ ಕೆಲ ಹಿರಿಯ ನಾಯಕರನ್ನು ಭೇಟಿ ಯಾಗಿ ಮಾತುಕತೆ ನಡೆಸುತ್ತೇನೆ. ಈ ಮಾತುಕತೆ ಪಕ್ಷ ಸಂಘಟನೆ, ಲೋಕಸಭಾ ಚುನಾವಣಾ ತಯಾರಿ ಹಾಗೂ ರೈತ ಸಮಾವೇಶಕ್ಕಷ್ಟೇ ಸೀಮಿತವಾಗಿರಲಿದೆ’ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.
ಶೋಭಾ ತಿರುಗೇಟು: ‘ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಅದನ್ನು ಶಮನಗೊಳಿಸಲು ಸಾಧ್ಯವಾಗದೆ ಇಂತಹ ಬ್ಲೇಮ್ ಗೇಮ್ ಮಾಡುತ್ತಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಯಾಗಿ ಟ್ವೀಟರ್‌ನಲ್ಲಿಯೇ ಉತ್ತರ ನೀಡಿರುವ ಅವರು, ‘ಬಿಜೆಪಿ ಕುದುರೆ ವ್ಯಾಪಾರಕ್ಕೆ ನಿಂತಿದೆ ಎನ್ನುವುದು ಇಲ್ಲ ಸಲ್ಲದ ಆರೋಪವಾಗಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ. ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜನತೆಯ ಮತ್ತು ಮಾಧ್ಯಮಗಳ ದಿಕ್ಕು ತಪ್ಪಿಸಲು ಇಂತಹ ಹೇಳಿಕೆ ನೀಡಿದ್ದಾರೆ. ದುರುದ್ದೇಶಿತಪೂರಿತವಾಗಿ ಸಿದ್ದರಾಮಯ್ಯ ಆಟವಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಕತ್ತೆ, ಕುದುರೆ, ಆನೆ ಯಾರು?- ಡೀವಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸುದ್ದಿಗಾರರ ಜತೆ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಇರುವ ಕುದುರೆ, ಕತ್ತೆ, ಆನೆ ಯಾರೆಂದು ಸಿದ್ದರಾಮಯ್ಯ ಅವರೇ ಹೇಳಬೇಕು. ಕಾಂಗ್ರೆಸ್‌ನಲ್ಲಿ ಮನುಷ್ಯರೇ ಇಲ್ಲವೇ? ಅವರ ಪಕ್ಷದಲ್ಲಿ ಮಾರಾಟವಾಗಬಲ್ಲವರು (ಸೇಲೆಬಲ್ ಗೂಡ್ಸ್) ಇದ್ದಾರೆಂದು ಅವರೇ ಹೇಳುತ್ತಿದ್ದಾರೆ’ ಎಂದು ಟಾಂಗ್ ಕೊಟ್ಟರು. ‘ಸಿದ್ದರಾಮಯ್ಯ ಒಬ್ಬ ಹಿರಿಯ ನಾಯಕನಾಗಿ ಏನು ಮಾತನಾಡಬೇಕು ಎನ್ನುವ ತಿಳುವಳಿಕೆ ಇರಬೇಕು. ಸ್ಪಲ್ಪ ಯೋಚಿಸಿ ಮಾತನಾಡಬೇಕು. ಸರ್ಕಾರ ರಚನೆಯಾಗಿ 7 ತಿಂಗಳು ಕಳೆದಿದೆ. ಹೇಳುವಂತಹ ಕಾರ್ಯ ಏನ್ನನ್ನೂ ಮಾಡಿಲ್ಲ. ಸಿದ್ದರಾಮಯ್ಯ ಹೇಳಿಕೆಯಲ್ಲಿಯೇ ಅವರ ಶಾಸಕರು ಯಾವ ರೀತಿ ಇದ್ದಾರೆ ಗೊತ್ತಾಗುತ್ತದೆ’ ಎಂದು ಕಿಡಿಕಾರಿದರು.
ಇದೇ ವೇಳೆ ಟ್ವೀಟರ್ ನಲ್ಲಿಯೂ ತಿರುಗೇಟು ನೀಡಿದ ಅವರು, ‘ಕೊಟ್ಟ ಕುದುರೆ ಏರಲಾದರವನು ಧೀರನೂ ಅಲ್ಲ, ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇದೊಂದು ಹೊಸ ಪ್ರಹಸನ. ಮುಲಾಜಿನ ಸರ್ಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿದ್ದೀರಿ. ಕನ್ನಡಿಗರು ಮುಗ್ಧರು, ಮೂರ್ಖರಲ್ಲ. ನಿಮ್ಮ ಗಿಲೀಟು ಮಾತು ನಂಬಲು’ ಎಂದಿದ್ದಾರೆ. ಬಿಜೆಪಿ ಕರ್ನಾಟಕ ಘಟಕ ಕೂಡ ಟ್ವೀಟರ್‌ನಲ್ಲಿ ತಿರುಗೇಟು ನೀಡಿ, ‘ಮಿ| ಟ್ವೀಟರಾಮಯ್ಯ, ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂಥ ಆರೋಪ ಮಾಡಬೇಡಿ’ ಎಂದು ಕಿಡಿಕಾರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.