ಸರ್ಕಾರ ಅಸ್ಥಿರಗೊಳಿಸುವ ಹಿಂದಿರುವ ಕಿಂಗ್‌ಪಿನ್‌ಗಳ್ಯಾರು?

By Web DeskFirst Published Sep 15, 2018, 7:54 AM IST
Highlights

ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು ಈ ಬಗ್ಗೆ ಇದೀಗ ಬಿಜೆಪಿ ಮುಖಂಡರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು ಇದರ ಹಿಂದಿನ ಕಿಂಗ್ ಪಿನ್ ಗಳ್ಯಾರು ಎನ್ನುವುದನ್ನು ಬಹಿರಂಗ ಪಡಿಸಿ ಎಂದಿದ್ದಾರೆ. 

ಬೆಂಗಳೂರು :  ಕಿಂಗ್‌ಪಿನ್‌ಗಳ ಮೂಲಕ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ‘ಗುಪ್ತಚರ ಇಲಾಖೆ ಮತ್ತು ಎಸಿಬಿ ನಿಮ್ಮ ಕೈಯಲ್ಲೇ ಇವೆ. ಆ ಕಿಂಗ್‌ಪಿನ್‌ಗಳು ಯಾರು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿರುವ ಬಿಜೆಪಿ ಮುಖಂಡರು, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಮಾಡಬಾರದು’ ತೀಕ್ಷ್ಣವಾಗಿ ಹೇಳಿದ್ದಾರೆ. 

ಅಲ್ಲದೆ, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಶುಕ್ರವಾರ ನಗರದಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಹರಿಹಾಯ್ದರು.

ಶೋಭಾ ಕರಂದ್ಲಾಜೆ ಮಾತನಾಡಿ, ‘ಹಿಟ್ ಅಂಡ್ ರನ್ ಮಾಡಬೇಡಿ ಕುಮಾರಸ್ವಾಮಿ ಅವರೇ. ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದೆ. ತನಿಖೆ ಮಾಡಿಸಿ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿ ಕುಮಾರಸ್ವಾಮಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದವರ ಹೆಸರುಗಳನ್ನು
ನಾವು ಕೇಳಿಯೇ ಇಲ್ಲ. 

ಜನರ ಗಮನ ಸೆಳೆಯಲು  ಈ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನಮ್ಮ ಬಿಜೆಪಿ ವಿರುದ್ಧ ಆರೋಪ ಮಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶೋಕ್ ಮಾತನಾಡಿ, ‘ಕಿಂಗ್‌ಪಿನ್‌ಗಳು ಯಾರು ಎಂಬುದನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಸಲಿ.  ಕಿಂಗ್‌ಪಿನ್ ಯಾರು ಎಂದರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೇ ಇರಬೇಕು. ಹಿಂದೆ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋದಾಗ  ಸರ್ಕಾರಕ್ಕೆ ತೊಂದರೆ ಆಗಿತ್ತು. ಈಗ ಸಿದ್ದರಾಮಯ್ಯ ಲಂಡನ್ ಹೋಗಿದ್ದಾರೆ. 

ಈಗ ಮತ್ತೆ ಇಲ್ಲಿ ಹೊತ್ತಿ ಉರಿಯುತ್ತಿದೆ’ ಎಂದರು. ಅರವಿಂದ್  ಲಿಂಬಾವಳಿ ಮಾತನಾಡಿ, ‘ರಾಜ್ಯದಲ್ಲಿ ಅತಿವೃಷ್ಟಿ ಆಗಿದೆ. ಆದರೆ ಈ ಬಗ್ಗೆ ಸರ್ಕಾ  ರದ ಆಡಳಿತ ಚುರುಕುಗೊಳಿಸುವುದನ್ನು ಬಿಟ್ಟು ಮುಖ್ಯ ಮಂತ್ರಿಗಳು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಘನತೆಗೆ ತಕ್ಕಹಾಗೆ ನಡೆದುಕೊಳ್ಳಲಿ. ಕಿಂಗ್ ಪಿನ್‌ಗಳ ಬಗ್ಗೆ ಮಾತಾಡಿ ದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವವರು ನೀವು. ಎಲ್ಲಿಯಾದರೂ ಹಣ ಇಟ್ಟಿದಾರೆ ಅಂದರೆ ಅದನ್ನ ರೇಡ್ ಮಾಡುವ ಅಧಿಕಾರ ನಿಮ್ಮಲ್ಲಿದೆ’ ಎಂದು ಹೇಳಿದರು.

click me!