ಎಷ್ಟೇ ಕೆರಳಿಸಿದರು ಬಿಜೆಪಿ ಗಪ್ ಚುಪ್ !

By Web DeskFirst Published Jul 20, 2019, 10:14 AM IST
Highlights

ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ಇದೇ ವೇಳೆ ಬಿಜೆಪಿ ಮುಖಂಡರು ಮಾತ್ರ ಗಪ್ ಚುಪ್ ಆಗಿದ್ದಾರೆ. 

ಬೆಂಗಳೂರು [ಜು.20]:  ಪ್ರತಿಪಕ್ಷದ ಸದಸ್ಯರನ್ನು ಹೇಗಾದರೂ ಕೆರಳಿಸಬೇಕೆಂಬ ಉದ್ದೇಶವಿಟ್ಟುಕೊಂಡವರಂತೆ ಆಡಳಿತಾರೂಢ ಪಕ್ಷದ ಸದಸ್ಯರು  ದಿನವಿಡೀ ಗಂಭೀರ ಆರೋಪ, ಟೀಕೆ ಟಿಪ್ಪಣಿ ಮಾಡಿದರೂ ಬಿಜೆಪಿ ಸದಸ್ಯರು ಮಾತ್ರ ಮೌನಕ್ಕೆ ಶರಣಾಗಿದ್ದು ವಿಶೇಷವಾಗಿತ್ತು. ಜೆಡಿಎಸ್ ಶಾಸಕ ಶ್ರೀನಿವಾಸಗೌಡ ತನಗೆ 5 ಕೋಟಿ ರು. ನೀಡಲಾಗಿದ್ದು, ಮುಂದೆ ೩೦ ಕೋಟಿ ರು. ನೀಡುವುದಾಗಿ ಬಿಜೆಪಿಯ ಸದಸ್ಯರು ತಿಳಿಸಿದ್ದರು ಎಂದು ಹೇಳಿದರು. 

ತಮ್ಮ  ಮನೆಗೆ ಬಿಜೆಪಿಯ ಡಾ.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವಾನಾಥ್, ಸಿ.ಪಿ.ಯೋಗೇಶ್ವರ್ ಬಂದು ಹಣ ನೀಡಿ ಹೋಗಿದ್ದರು ಎಂದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಮುಗಿಬಿದ್ದರು. ಆದರೂ ಯಾವುದೇ ರೀತಿಯಿಂದಲೂ  ಪ್ರಚೋದನೆ ಗೊಳಗಾಗದೆ ಪ್ರತಿಕ್ರಿಯೆ ನೀಡಲಿಲ್ಲ. ಯಾವೊಬ್ಬ ಸದಸ್ಯರು ಸಹ ಈ ವಿಚಾರದಲ್ಲಿ ತುಟಿ ಬಿಚ್ಚಲಿಲ್ಲ. 

ಈ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಈ ಆರೋಪ ಸುಳ್ಳಾದರೆ ಹಕ್ಕುಚ್ಯುತಿ ಮಾಡಬೇಕಾಗಿತ್ತು. 30 ಕೋಟಿ ರು. ಆಫರ್ ನೀಡಿರುವುದು ನಿಜವಾಗಿರುವ ಕಾರಣ ಸುಮ್ಮನಾಗಿದ್ದಾರೆ. ನೂರಾರು ಕೋಟಿ ರು. ವಸೂಲಿ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಮೊದಲೇ ಈ ರೀತಿಯಾದರೆ, ಅಧಿಕಾರಕ್ಕೆ ಬಂದ ಬಳಿಕ ಇನ್ನೆಷ್ಟು ವಸೂಲಿ ಮಾಡಬಹುದು ಎಂದು ಕೆಣಕಿದರು. ಅಲ್ಲದೇ, ಪ್ರತಿ ವಿಚಾರಕ್ಕೂ ಮಧ್ಯಪ್ರವೇಶಿಸುತ್ತಿದ್ದ ಮಾಧುಸ್ವಾಮಿ ಅವರು ಈಗ ಯಾಕೆ ಸುಮ್ಮನೆ ಇದ್ದಾರೆ ಎಂದು ಪ್ರಶ್ನಿಸಿದರು. 

ಆಡಳಿತ ಪಕ್ಷದವರು ಎಷ್ಟೇ ಕೆಣಕಿದರೂ ಬಿಜೆಪಿಯವರು ಮಾತ್ರ ಪ್ರಚೋದನೆಗೊಳಗಾಗದೆ ತಡೆದುಕೊಂಡಿದ್ದರು. ಯಡಿಯೂರಪ್ಪ ಸೂಚನೆ ಮೇರೆಗೆ ಎಲ್ಲ ಸದಸ್ಯರು ಮೌನವಾಗಿ ಆಲಿಸುತ್ತಿದ್ದರು. 

click me!