
ಬೆಳಗಾವಿ : ಸದ್ಯ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ವಿಚಾರ ಇನ್ನಷ್ಟು ಗರಿಗೆದರಿದ ಬೆನ್ನಲ್ಲೇ, ಬಿಜೆಪಿ ಮುಖಂಡ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
'ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಆಗಿರುವ ರಮೇಶ್ ಜಾರಕಿಹೊಳಿ ಮಾನಸಿಕವಾಗಿ ಸರ್ಕಾರದಿಂದ ದೂರವಾಗಿದ್ದಾರೆ,' ಎಂದು ಹೇಳಿದ್ದು, ಆ ಮೂಲಕ ಈಗಾಗಲೇ ಜಾರಕಿಹೊಳಿ ಸಹೋದರರು ಬಿಜೆಪಿಗೆ ಸೇರುತ್ತಾರೆಂಬ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಂತಾಗಿವೆ.
ಯಾರು ಸರ್ಕಾರದಿಂದ ಮಾನಸಿಕವಾಗಿ ದೂರವಾಗಿ ಇರುತ್ತಾರೋ, ಅವರು ವಿರೋಧ ಪಕ್ಷದ ಬಗ್ಗೆ ಸಹಾನುಭೂತಿಯಿಂದ ಇರುತ್ತಾರೆ ಎಂದರ್ಥ. ಸಚಿವ ರಮೇಶ ಜಾರಕಿಹೊಳಿ ಬಿಜೆಪಿಗೆ ಬರುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ ಸೇರಬಹುದು ಎನ್ನುವ ನಿರೀಕ್ಷೆ ಇದೆ. ಸತೀಶ ಜಾರಕಿಹೊಳಿ 7 ರಿಂದ 8 ಜನ ಶಾಸಕರು ಬಿಜೆಪಿಗೆ ಹೋಗಬಹುದು ಎಂದು ಹೇಳಿದ್ದು, ಅವರು ಹೇಳಿರುವುದು ಖಂಡಿತಾ ಸತ್ಯ ಎಂದಿದ್ದಾರೆ.
ಇನ್ನು ಸರ್ಕಾರದ ಆಡಳಿತ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಮ್ಮಿಶ್ರ ಸರ್ಕಾರ ಇನ್ನೂ ಟೆಕಾಫ್ ಆಗಿಲ್ಲ. ಅದಕ್ಕೆ ಅಂಕಗಳನ್ನು ಎಲ್ಲಿಂದ ಕೊಡೋದು. ಸರ್ಕಾರಕ್ಕೆ ಮಾರ್ಕ್ಸ್ ಕೊಟ್ಟರೆ ನಾವೇ ದಡ್ಡರಾಗುತ್ತೇವೆ. ಸಚಿವರು ಯಾರೂ ವಿಧಾನಸೌಧದ ಮೆಟ್ಟಿಲು ಬಿಟ್ಟು ಬರುತ್ತಿಲ್ಲ. ಕೆಲವರು ಜಿಲ್ಲೆಗೆ, ಕೆಲವರು ಕ್ಷೇತ್ರಕ್ಕೆ ಮಾತ್ರವೇ ಸಮೀತವಾಗಿರೋ ಮಂತ್ರಿಯಾಗಿದ್ದಾರೆ, ಎಂದು ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಯಾರೊಬ್ಬರೂ ಜನರ ಸಮಸ್ಯೆಯನ್ನ ಆಲಿಸುತ್ತಿಲ್ಲ. ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿ ಯಾವುದೇ ಕೆಲಸವನ್ನೂ ಮಾಡುತ್ತಿಲ್ಲ. ಕಾಂಗ್ರೆಸ್ ನವರು ಸಿಎಂ ಗೆ ಕೆಲಸ ಮಾಡಲು ಬಿಡುತ್ತಿಲ್ಲ. ದೋಸ್ತಿ ಸರ್ಕಾರದಲ್ಲಿ ಈಗಾಗಲೇ ತಳಮಳ ಆರಂಭವಾಗಿದೆ ಎಂದು ಪೂಜಾರಿ ಹೇಳಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.