ಸ್ವಾಮೀಜಿಯೋರ್ವರ ಈ ಹೇಳಿಕೆ ಹಿಂದಿದೆ ಸರ್ಕಾರದ ಭವಿಷ್ಯ

First Published Jul 7, 2018, 7:33 AM IST
Highlights

ಟಗರು ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದರೆ ಸುಮ್ಮನಾಗಿದೆ ಎಂದಲ್ಲ ಗಟ್ಟಿಯಾಗಿ ಗುದ್ದಲು ರೆಡಿಯಾಗಿದೆ ಎಂದರ್ಥ’ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಮೈತ್ರಿ ಸರ್ಕಾರ ಸುಟ್ಟುಹೋಗಲು ಆಡಳಿತ ಪಕ್ಷದವರಿಂದಲೇ ಕಿಡಿ ಬೀಳಲಿದೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ವಿಧಾನಸಭೆ :  ‘ಟಗರು ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದರೆ ಸುಮ್ಮನಾಗಿದೆ ಎಂದಲ್ಲ ಗಟ್ಟಿಯಾಗಿ ಗುದ್ದಲು ರೆಡಿಯಾಗಿದೆ ಎಂದರ್ಥ’ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ಸಿದ್ದರಾಮಯ್ಯ ಅವರೇ ಈಗಲೂ ರಾಜಕೀಯದ ಕೇಂದ್ರ ಬಿಂದು. ಹೀಗಾಗಿ ಮೈತ್ರಿ ಸರ್ಕಾರ ಸುಟ್ಟುಹೋಗಲು ಆಡಳಿತ ಪಕ್ಷದವರಿಂದಲೇ ಕಿಡಿ ಬೀಳಲಿದೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಶುಕ್ರವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಶ್ರವಣಬೆಳಗೊಳ ಜೆಡಿಎಸ್‌ ಶಾಸಕ ಸಿ.ಎನ್‌. ಬಾಲಕೃಷ್ಣ, ಇದು ಅಪವಿತ್ರ ಮೈತ್ರಿಯ ಸರ್ಕಾರವಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಐದು ವರ್ಷ ಸುಭದ್ರವಾಗಿ ಸರ್ಕಾರ ಆಡಳಿತ ನೀಡಲಿದೆ. ಸಿದ್ದರಾಮಯ್ಯ ಅವರು ಸಹ ಎಲ್ಲಾ ರೀತಿಯ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಸಿ.ಟಿ. ರವಿ, ಬಾಲಕೃಷ್ಣ ಅವರು ಐದು ವರ್ಷ ಸುಭದ್ರವಾಗಿ ಸರ್ಕಾರ ನಡೆಯಲಿ ಎನ್ನುತ್ತಿದ್ದಾರೆ. ‘ಟಗರು ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದರೆ ಸುಮ್ಮನಾಗಿದೆ ಎಂದಲ್ಲ ಗಟ್ಟಿಯಾಗಿ ಗುದ್ದಲು ರೆಡಿಯಾಗಿದೆ ಎಂದರ್ಥ’ ಎಂಬ ಸ್ವಾಮೀಜಿಗಳ ಹೇಳಿಕೆ ಮೇಲೂ ಬೆಳಕು ಚೆಲ್ಲಬೇಕು ಎಂದು ಕಿಚಾಯಿಸಿದರು.

ಜೆಡಿಎಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸರ್ಕಾರವನ್ನು ಅಭದ್ರಗೊಳಿಸುವ ಬಗ್ಗೆ ಸಿದ್ದರಾಮಯ್ಯ ಯಾವತ್ತೂ ಮಾತನಾಡಿಲ್ಲ. ಮಾಧ್ಯಮಗಳು ಸುದ್ದಿಯನ್ನು ತಿರುಚಿದ್ದು, ಸಿದ್ದರಾಮಯ್ಯ ಸಹಕಾರದಿಂದಲೇ ಸರ್ಕಾರ ನಡೆಯುತ್ತಿದೆ. ನಮ್ಮ ಕುಟುಂಬದಲ್ಲಿ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಸಿ.ಟಿ. ರವಿಗೆ ತಿರುಗೇಟು ನೀಡಿದರು.

ರೇವಣ್ಣರಿಂದ ಸಿದ್ದರಾಮಯ್ಯ ಪ್ರದಕ್ಷಿಣೆ:  ಮಾತು ಮುಂದುವರೆಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರಲಿ ಬಿಡಲಿ ಅವರು ರಾಜಕೀಯದ ಕೇಂದ್ರ ಬಿಂದು. ಅವರು ಮೈತ್ರಿ ಸರ್ಕಾರಕ್ಕೆ ದೇವರ ಥರ ಆಗಿದ್ದಾರೆ. ನಿತ್ಯವೂ ದೇವರ ಪೂಜೆ ಮಾಡುವ ಎಚ್‌.ಡಿ. ರೇವಣ್ಣ ಅವರು ಕೂಡ ಸದನದಲ್ಲಿ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಒಂದು ಸುತ್ತು ಪ್ರದಕ್ಷಿಣೆ ಮಾಡಿಯೇ ಬಂದು ಕೂರುವುದು ಎಂದು ಕಾಲೆಳೆದರು.

ಧರಂ ಸಿಂಗ್‌ ಅವರ ಸರ್ಕಾರ ರಚನೆಯಾದಾಗ ನಾನು ಮೊದಲ ಬಾರಿಗೆ ಶಾಸಕ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಧರಂ ಸಿಂಗ್‌ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಲ್ಲಿ ವಿರೋಧಪಕ್ಷದವರು ಯಾವುದೇ ಕಿಡಿ ಹಾಕಲಿಲ್ಲ. ಧರಂಸಿಂಗ್‌ ನಂಬಿದ್ದವರೇ ಕಿಡಿಹಾಕಿ ಸರ್ಕಾರವನ್ನು ಬೀಳಿಸಿದರು. ಈ ಮೈತ್ರಿ ಸರ್ಕಾರಕ್ಕೂ ಸಹ ವಿರೋಧಪಕ್ಷದವರು ಕಿಡಿ ಹಾಕಬೇಕಿಲ್ಲ. ಆಡಳಿತಪಕ್ಷದಲ್ಲಿರುವವರೇ ಕಿಡಿ ಹಾಕಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

click me!