'ಸಾಲಮನ್ನಾಕ್ಕೆ ದೇವರ ಹಣ ಬಳಕೆ: ದಿವಾಳಿ ಹಂತದಲ್ಲಿ ರಾಜ್ಯ ಸರ್ಕಾರ'

By Web DeskFirst Published Oct 27, 2018, 9:08 AM IST
Highlights

ಮೈತ್ರಿ ಸರ್ಕಾರ ರೈತರ ಸಾಲಮನ್ನಾಕ್ಕಾಗಿ ದೇವಾಲಯದ ಹುಂಡಿ ಹಣಕ್ಕೆ ಕೈಹಾಕಿದೆ, ಸರ್ಕಾರ ದಿವಾಳಿ ಹಂತ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಮಂಡ್ಯ :  ರೈತರ ಸಾಲಮನ್ನಾ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರ ರೈತರ ಸಾಲಮನ್ನಾಕ್ಕಾಗಿ ದೇವಾಲಯದ ಹುಂಡಿ ಹಣಕ್ಕೆ ಕೈಹಾಕಿದೆ, ಸರ್ಕಾರ ದಿವಾಳಿ ಹಂತ ತಲುಪಿದೆ ಎಂದು ಆರೋಪಿಸಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ, ನಾಗಮಂಗಲ, ಮಳವಳ್ಳಿಗಳಲ್ಲಿ ಶುಕ್ರವಾರ ಬಿಜೆಪಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಸಾಲಮನ್ನಾಗಾಗಿ ರಾಜ್ಯ ಸರ್ಕಾರವು ಶ್ರೀರಂಗಪಟ್ಟಣ, ಮೇಲುಕೋಟೆ ದೇವಸ್ಥಾನಗಳ ಹುಂಡಿಗಳಿಗೆ ಈಗಾಗಲೇ ಕೈ ಹಾಕಿದೆ ಎಂದರು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಕಳೆದರೂ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿರುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸಹಕಾರ ಸಂಘದಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಿದ್ದೇವೆಂದು ಘೋಷಣೆ ಮಾಡಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಪ್ರಧಾನಿ ಮೋದಿ ಅಡ್ಡಿಪಡಿಸುತ್ತಾರೆ ಎಂದು ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. 

ತನ್ನ ಕೈಲಾಗದ್ದಕ್ಕೆ ಪ್ರಧಾನಿ ಮೋದಿ ಕಡೆಗೆ ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ಈ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಮನ್ನಾ ಮಾಡಿದರೆ ಕುಮಾರಸ್ವಾಮಿ ಹಣ ಪಾವತಿಸುತ್ತಾರಾ? ಎಂದು ಯಡಿಯೂರಪ್ಪ ಕಿಡಿಕಾರಿದರು. ಜತೆಗೆ, ಇದನ್ನೆಲ್ಲ ನಾಡಿನ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕಪಾಟ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

click me!