ಬಿಎಸ್‌ವೈ, ಎಚ್‌ಡಿಕೆ ಸಿಎಂ ಆಗೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದಾರೆ; ಅವರಪ್ಪರಾಣೆಗೂ ಗೆಲ್ಲಲ್ಲ

By Suvarna Web DeskFirst Published Jul 11, 2017, 10:14 PM IST
Highlights

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಮಿಷನ್ 150 ಪ್ಲಸ್’ ಯೋಜನೆ ಠುಸ್ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕಲಬುರಗಿ (ಜು.11): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಮಿಷನ್ 150 ಪ್ಲಸ್’ ಯೋಜನೆ ಠುಸ್ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
 
ಕಲಬುರಗಿಯಲ್ಲಿ ಮಂಗಳವಾರ ನಡೆದ ವಿಭಾಗೀಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆ ಮುಂಬರುವ 2018 ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಹೇಳಿತ್ತು. ಅದು ಠುಸ್ ಆಯಿತು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಠುಸ್ ಆದರು. ಅದೇ ರೀತಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಮಿಷನ್ ೧೫೦ ಪ್ಲಸ್ ಠುಸ್ ಆಗಲಿದೆ ಎಂದು ಲೇವಡಿ ಮಾಡಿದಾಗ ಸೇರಿದ್ದ ಜನಸ್ತೋಮ ಕೇಕೆ ಹಾಕಿ ನಕ್ಕಿತು. ಜೆಡಿಎಸ್ ನಾಯಕ ಕುಮಾರಸ್ವಾಮಿ, ಬಿಜೆಪಿಯ ಯಡಿಯೂರಪ್ಪ ಭ್ರಮಾಲೋಕದಲ್ಲಿದ್ದಾರೆ. ಇನ್ನೇನು ಸಿಎಂ ಆಗೇಬಿಟ್ಟೇವು ಎಂದು ಬೀಗುತ್ತಿದ್ದಾರೆ. ನಂಜನಗೂಡು- ಗುಂಡ್ಲುಪೇಟೆಯಲ್ಲಿ ಏನಾಯ್ತು? ಜನ ಕಾಂಗ್ರೆಸ್ ಸಾಧನೆಗೆ ಮೆಚ್ಚಿ ದೊಡ್ಡ ಪ್ರಮಾಣದ ಲೀಡ್‌ನೊಂದಿಗೆ ಗೆಲ್ಲಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ, ೧೫೦ ಪ್ಲಸ್ ಸ್ಥಾನ ಗಳಿಸಲಿದೆ ಎಂದು ಹೇಳುವುದು ಯಡಿಯೂರಪ್ಪ ಭ್ರಮೆ. ಅವರಪ್ಪರಾಣೆಗೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
 
ಯಡಿಯೂರಪ್ಪಗೆ ಸವಾಲ್:
ಬಸವಣ್ಣನವರ ಹೆಸರು ಹೇಳಿಕೊಳ್ಳುವ ನೈತಿಕ ಹಕ್ಕು ಬಿಜೆಪಿಯವರಿಗಿಲ್ಲ. ಬಸವಣ್ಣನವರು ಅಂದು ಬ್ರಾಹ್ಮಣ ಮತ್ತು ದಲಿತರ ಸಮುದಾಯದಲ್ಲಿ ಸಾಮರಸ್ಯ ಮೂಡಿಸಲು ದಲಿತ ಮತ್ತು ಬ್ರಾಹ್ಮಣ ಸಮುದಾಯದ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಿದರು. ನಿಮ್ಮಲ್ಲಿ ಅಂತಹ ಮನೋಧೋರಣೆಯಿದ್ದರೆ ನಿಮ್ಮ ಹೆಣ್ಣು ಮಕ್ಕಳನ್ನು ದಲಿತರಿಗೆ ಕೊಡಿ. ಅವರ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ ತನ್ನಿ. ಆಗ ನೀವು ಬಸವಣ್ಣನವರ ಹೆಸರು ಹೇಳಲಿಕ್ಕೆ ಯೋಗ್ಯರಾಗುತ್ತೀರಿ ಎಂದು ಸವಾಲು ಹಾಕಿದರು. ಬುದ್ಧ, ಬಸವ, ಅಂಬೇಡ್ಕರ್‌ರವರ ವಿಚಾರಗಳಿಗೆ ಬದ್ಧರಾಗುವುದನ್ನು ಬಿಟ್ಟು ದಲಿತರ ಮನೆಗೆ ತಿಂಡಿ ತಿನ್ನಲು ಹೋಗುತ್ತಾರೆ. ಹೋಟೆಲಿನಿಂದ ಇಡ್ಲಿ ಸಾಂಬರ್, ದೋಸೆ ತರಿಸಿ ಊಟ ಮಾಡುವ ನಿಮಗೆ ನಾಚಿಕೆಯಾಗಬೇಕು. ದಲಿತರ ಮೇಲೆ ಎಲ್ಲಿಲ್ಲದ ಕಾಳಜಿ ಈಗೆಲ್ಲಿಂದ ಬಂತು ಇವರಿಗೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ನಿಮಗೆ ನಾಚಿಕೆಯಾಗಲ್ಲವೇ. ಇದೆಲ್ಲಾ ನಾಟಕ ಬಿಟ್ಟುಬಿಡಿ ಎಂದು ಯಡಿಯೂರಪ್ಪಗೆ ಮಾತಿನಲ್ಲೇ ತಿವಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿ, ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದೇ ಬಿಜೆಪಿಯ ಕಾರ್ಯಕ್ರಮವಾಗಿದೆ ಎಂದು ಟೀಕಿಸಿದರೆ, ಇಂಧನ ಸಚಿವ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಹೈಕ ಭಾಗದ ೪೦ರಲ್ಲಿ ೨೯ ಶಾಸಕರನ್ನು ಆರಿಸಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದೀರಿ. ೩ರಿಂದ ೪ ಸಲ ಗೆದ್ದವರು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಮೆಚ್ಚಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
 
ಇಡೀ ದೇಶ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ: ವೇಣು
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಇಡೀ ದೇಶ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಕರ್ನಾಟಕವನ್ನು ಉಳಿಸುವ ಕೆಲಸ ಈಗ ನಿಮ್ಮ ಕೈಯಲ್ಲಿದೆ ಎಂದರಲ್ಲದೆ, ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಹ ಕೇಂದ್ರ ಸರ್ಕಾರವು ರೈತರ ನೆರವಿಗೆ ಬರಲಿಲ್ಲ. ಮಧ್ಯಪ್ರದೇಶದಲ್ಲಿ ಹೋರಾಟ ಮಾಡುವ ರೈತರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಖಂಡನೀಯ. ಆದರೆ ಕಾಂಗ್ರೆಸ್ ಸರ್ಕಾರವು ರೈತರ ಹಿತಕ್ಕಾಗಿ ಸಹಕಾರಿ ಬ್ಯಾಂಕಿನಲ್ಲಿರುವ ರೈತರ ಸಾಲ ಮನ್ನಾ ಸೇರಿದಂತೆ ಇತರ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕೆಂದು ಕಾರ್ಯಕರ್ತರಿಗೆ ಹೇಳಿದರು.
click me!