ಬೆಂಗಳೂರು [ಜು.15] : ಸೋಮವಾರವೇ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸುವಂತೆ ಪ್ರತಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ಸ್ಪೀಕರ್ ಅವರನ್ನು ಒತ್ತಾಯಿಸಲು ತೀರ್ಮಾನಿಸಿದೆ.
ಸದ್ಯದ ಮಾಹಿತಿ ಪ್ರಕಾರ ಮಂಗಳವಾರದ ಸುಪ್ರೀಂಕೋರ್ಟ್ ನಡೆ ಗಮನಿಸಿ ಬುಧವಾರ ವಿಶ್ವಾಸಮತ ಯಾಚನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿಂತನೆ ನಡೆಸಿದ್ದಾರೆ. ಆದರೆ, ವಿಶ್ವಾಸಮತ ಯಾಚನೆಗೆ ಹೆಚ್ಚು ಸಮಯ ಕೊಡುವ ಬದಲು ಸೋಮವಾರವೇ ಆಗಲಿ ಎಂಬ ನಿಲುವಿಗೆ ಬಿಜೆಪಿ ಬಂದಿದೆ.
ಭಾನುವಾರ ರಾಜೀನಾಮೆ ನೀಡಿರುವ ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ತಾವು ಯಾವುದೇ ಕಾರಣಕ್ಕೂ ಮುಂದಿಟ್ಟಹೆಜ್ಜೆ ಹಿಂದಿಡುವುದಿಲ್ಲ ಎಂದು ಘೋಷಿಸುತ್ತಿದಂತೆಯೇ ಬಿಜೆಪಿ ಇನ್ನು ವಿಳಂಬ ಮಾಡದೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿ ಎಂಬ ಒತ್ತಡ ಹೇರಲು ಮುಂದಾಗಿದೆ.
ನಗರದ ಯಲಹಂಕ ಬಳಿಯ ರೆಸಾರ್ಟ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದ ನಂತರ ಸೋಮವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಶ್ವಾಸಮತ ಯಾಚನೆಗೆ ತಕ್ಷಣ ಸಮಯ ನಿರ್ಧರಿಸುವಂತೆ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.
ಇನ್ನು ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಿ ಪ್ರಯೋಜನವಿಲ್ಲ. ಇಡೀ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದ ಮೇಲೆ ಆಡಳಿತ ನಡೆಸುವುದಕ್ಕೆ ಸಾಧ್ಯವಿಲ್ಲ. ಬಹುಮತದ ಕೊರತೆಯಿಂದಾಗಿ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಹೀಗಾಗಿ, ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ತಕ್ಷಣ ಮುಗಿಸಬೇಕು ಎಂಬ ಒತ್ತಡ ಹೇರಲಾಗುವುದು. ಈ ಬಗ್ಗೆ ಸೋಮವಾರ ಬೆಳಗ್ಗೆ ಮತ್ತೊಮ್ಮೆ ಶಾಸಕಾಂಗ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸೋಮವಾರ ವಿಶ್ವಾಸಮತ ಯಾಚಿಸಲಿ- ಬಿಎಸ್‌ವೈ:
ಸರ್ಕಾರ ಅಲ್ಪ ಮತಕ್ಕೆ ಕುಸಿದಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಬೇಕು ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 15 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಶಾಸಕರ ವಿಶ್ವಾಸ ಕಳೆದುಕೊಂಡು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವುದು ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರಾದ ಎಂ.ಟಿ.ಬಿ.ನಾಗರಾಜ್ ಮತ್ತು ಡಾ.ಸುಧಾಕರ್ ಮನವೊಲಿಕೆ ನಂತರವೂ ಮುಂಬೈಗೆ ತೆರಳಿದ್ದಾರೆ. ಶಾಸಕರಿಗೆ ಮುಖ್ಯಮಂತ್ರಿ ಮೇಲೆ ವಿಶ್ವಾವಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದು ಸೂಕ್ತ. ಅವರೇ ಸದನದಲ್ಲಿ ವಿಶ್ವಾಸ ಮತಯಾಚಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಯಾವುದೇ ಕಾರ್ಯ ಕಲಾಪ ನಡೆಯುವುದಿಲ್ಲ ಎಂದಿದ್ದಾರೆ. ಹಾಗಾಗಿ ಸೋಮವಾರವೇ ವಿಶ್ವಾಸ ಮತ ಯಾಚಿಸಲಿ. ಸ್ಪೀಕರ್‌ಗೆ ಸಲಹಾ ಕಲಾಪ ಸಮಿತಿ ಸಭೆಯಲ್ಲಿ ಸೋಮವಾರವೇ ವಿಶ್ವಾಸಮತ ಯಾಚನೆಗೆ ಸಮಯ ಕೊಡುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.