
ಕಲಬುರಗಿ (ಜ.21): ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ವಿಚಾರದಲ್ಲಿ ಶುರುವಾಗಿರುವ ಕಮಲ ಪಡೆ ಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಸಂಘರ್ಷ ಕಲಬುರಗಿಯಲ್ಲಿ ಆರಂಭವಾಗಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆ ಸಮಾರಂಭದಲ್ಲಿಯೂ ಪ್ರತಿಧ್ವನಿಸಿತು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಪರಸ್ಪರ ಮುಖಕೊಟ್ಟು ಮಾತನಾಡಲಿಲ್ಲ, ೨ ಗಂಟೆಕಾಲ ನಡೆದ ಉದ್ಘಾಟನಾ ಸಮಾರಂಭದುದ್ದಕ್ಕೂ ಇಬ್ಬರೂ ಅಪ್ಪಿತಪ್ಪಿ ಒಮ್ಮೆಯೂ ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಳ್ಳಲಿಲ್ಲ. ಒಬ್ಬರಿಗೊಬ್ಬರು ಮುಖಾಮುಖಿಯಾಗುವ ಸಂದರ್ಭಗಳು ಎದುರಾದರೂ ಇಬ್ಬರೂ ಸಾಂದರ್ಭಿಕ ಜಾಣ್ಮೆ ಬಳಸುತ್ತ ಅಂತಹ ಪ್ರಸಂಗಗಳಿಂದ ತಪ್ಪಿಸಿಕೊಂಡರು. ತಮಗಿಂತ ಮುಂಚೆಯೇ ವೇದಿಕೆಯಲ್ಲಿ ಆಸೀನರಾಗಿದ್ದ ಯಡಿಯೂರಪ್ಪ ಅವರ ಪಕ್ಕದಿಂದಲೇ ಈಶ್ವರಪ್ಪ ಸಾಗಿ ಹೋದರೂ ಸಹ ಮುಗುಳುನಗು ವಿನಿಮಯವೂ ನಡೆಯಲಿಲ್ಲ
ಈಶ್ವರಪ್ಪ ಹೆಸರು ಹೇಳಲಿಲ್ಲ:
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಉದ್ಘಾಟನೆ ಭಾಷಣ ಮಾಡುವಾಗ ಕೇಂದ್ರದ ಸಚಿವರು, ಉಸ್ತುವಾರಿಗಳ ಹೆಸರನ್ನು ಮಾತ್ರ ಹೇಳಿದರೆ ಹೊರತು ವೇದಿಕೆಯಲ್ಲಿದ್ದ ಈಶ್ವರಪ್ಪ ಮೊದಲ್ಗೊಂಡು ಯಾರ ಹೆಸರನ್ನೂ ಹೇಳಲೇ ಇಲ್ಲ. ಅದೆಲ್ಲಿ ರಾಜ್ಯ ನಾಯಕರ ಹೆಸರನ್ನೆಲ್ಲ ಹೇಳುವಾಗ ಈಶ್ವರಪ್ಪ ಹೆಸರು ಹೇಳಬೇಕಾಗುತ್ತದೋ ಎಂದು ಜಾಣತನದಿಂದ ಕೇಂದ್ರದ ನಾಯಕರ ಹೆಸರನ್ನಷ್ಟೇ ಉಲ್ಲೇಖಿಸುತ್ತ ತಮಗೆ ಬೇಡವಾದವರ ಹೆಸರು ಹೇಳುವ ಮುಜುಗರದಿಂದ ಪಾರಾದಂತಿತ್ತು. ಇತ್ತ ಉದ್ಘಾಟನೆ ಸಮಾರಂಭ ಮುಗಿದು ವಂದನಾರ್ಪಣೆ ನಡೆಯುತ್ತಿದ್ದಂತೆಯೇ ವೇದಿಕೆಯಿಂದ ಸರಸರನೇ ಇಳಿದು ಹೋದ ಈಶ್ವರಪ್ಪ ಅದಾಗಲೇ ಹೊರಗಡೆ ಕಾಯುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡರು. ’ನಮ್ಮ ಜೊತೆ ನೀನು ಒಬ್ಬ ಬಂದ್ಯಾ? ಬಾ, ಎಲ್ಲರೂ ಕೂಡಿ ಮಾತುಕತೆ ನಡೆಸೋಣ ಎಂದು ಮಾರ್ಮಿಕವಾಗಿ ಹೇಳುತ್ತಲೇ ತಮಗೆಲ್ಲೋ ’ತುರ್ತಾಗಿ ಹೋಗುವುದಿದೆ, ಮತ್ತೆ ಬರುತ್ತೇನೆ’ ಎಂದು ಜಾಗ ಖಾಲಿ ಮಾಡಿದರು.
ಯಡಿಯೂರಪ್ಪರನ್ನು ಶ್ಲಾಘಿಸಿದ ಅನಂತ ಕುಮಾರ್:
ಬಿಜೆಪಿ ರಾಜ್ಯ ರಾಜಕೀಯದಲ್ಲಿ ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಸಂಬಂಧ ಅಷ್ಟಕ್ಕಷ್ಟೆ ಎಂಬುದು ಸರ್ವವೇದ್ಯವಾದ ಸಂಗತಿ. ಆದರೆ ಈ ಕಾರ್ಯಕಾರಣಿಯಲ್ಲಿ ಅನಂತ ಕುಮಾರ್ ವೇದಿಕೆಯಲ್ಲಿದ್ದ ನಾಯಕರ ಹೆಸರು ಹೇಳುವಾಗಲೇ ಹಲವು ವಿಶೇಷಣಗಳನ್ನು ಬಳಸುತ್ತ ಯಡಿಯೂರಪ್ಪನವರನ್ನು ಶ್ಲಾಘಿಸಿದ್ದು ಸೇರಿದ್ದ ಕಾರ್ಯಕಾರಿಣಿಯನ್ನೇ ಚಕಿತಗೊಳಿಸಿತು.
ಕಾರ್ಯ ಕಾರಣಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಸಚಿವ ಅನಂತ ಕುಮಾರ್ ಯಡಿಯೂರಪ್ಪನವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ೧೯೮೭ರಲ್ಲಿ ಬಿಜೆಪಿ ಕಾರ್ಯಕಾರಣಿ ಕಲಬುರಗಿಯಲ್ಲಿ ನಡೆದ ಸಂದರ್ಭ, ಆಗ ಯಡಿಯೂರಪ್ಪ ಅಧ್ಯಕ್ಷರಾಗಿದ್ದ ಪ್ರಸಂಗ, ತಾವು ಪ್ರಧಾನ ಕಾರ್ಯದರ್ಶಿಯಾಗಿದ್ದದ್ದನ್ನು ಮೆಲಕು ಹಾಕುತ್ತಲೇ ರಾಜ್ಯದಲ್ಲಿ ಕಮಲ ಪಡೆ ಕಟ್ಟಿ ಬೆಳೆಸುವಲ್ಲಿನ ಯಡಿಯೂರಪ್ಪ ಪಾತ್ರ ಯಾರೂ ಮರೆಯಲಾಗದು ಎಂದರು. ಅಂದು ೧೯೮೩ರಲ್ಲಿ ಶಿಕಾರಿಪುರದಿಂದ ಶಾಸಕರಾಗಿ ಬಂದಿದ್ದ ಯಡಿಯೂರಪ್ಪ ಅದ್ಯಾವ ಜೋಶ್‌ನಿಂದ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಬಲ ತುಂಬಿದರೋ, ಈಗಲೂ ಅದೇ ಜೋಶ್, ಭರಾಟೆಯಲ್ಲಿ ಪ್ರವಾಸ ಮಾಡುತ್ತ ರಾಜ್ಯದಲ್ಲಿ ಪಕ್ಷದ ಬಲವರ್ಧನೆ ಮಾಡುತ್ತಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಗಟ್ಟಿಮುಟ್ಟಾಗಿ ಕಟ್ಟುವಲ್ಲಿ ಯಡಿಯೂರಪ್ಪನವರು ’ಅವಿಶ್ರಾಂತ ಚೇತನ’ ಎಂದು ಬಣ್ಣಿಸಿ ಎಲ್ಲರ ಗಮನ ಸೆಳೆದರು.
ಸೋಮಣ್ಣ ಒಗಟಿನ ಮಾತು:
ಸಭೆ ಶುರುವಾದ ಕೆಲ ಸಮಯದ ನಂತರ ಸಭಾಂಗಣಕ್ಕೆ ವಿ.ಸೋಮಣ್ಣ ಬಂದರೂ ಸಂಘಟಕರ ಸ್ಪಂದನೆ ನೀರಸವಾಗಿತ್ತು. ಸಭಾಂಗಣದಲ್ಲಿ ಆಸನಗಳೆಲ್ಲವೂ ಭರ್ತಿ. ತಾವಾಗಿಯೇ ಕೊನೆಯ ಸೀಟಿನಲ್ಲಿ ಕುಳಿತವರೇ ಉದ್ಘಾಟನೆ ಮುಗಿಯುತ್ತಿದ್ದಂತೆ ಹೊರ ಬಂದರು. ಮಾಧ್ಯಮದವರು ಮಾತಿಗೆ ಎಳೆದಾಗ ’ಅಯ್ಯೋ ನಮಗಿಲ್ಲಿ ಜಾಗವೇ ಇಲ್ಲ ಸ್ವಾಮಿ, ನಾವೇನು ಹೇಳೋಣ, ಹೇಳೋದೆಲ್ಲ ಹೇಳಿದ್ದಾಗಿದೆಯಲ್ಲ ಎಂದು ಒಗಟಾಗಿ ನುಡಿದರು.
ಈಶ್ವರಪ್ಪ- ಸೋಮಣ್ಣ ಆಲಿಂಗನ:
ಇತ್ತ ಈಶ್ವರಪ್ಪ, ಅತ್ತ ಸೋಮಣ್ಣ ಇಬ್ಬರೂ ಕಾರ್ಯಕಾರಣಿ ಸಭಾಂಗಣದಿಂದ ಏಕಕಾಲಕ್ಕೆ ಹೊರಬಂದಾಗ ಅಂಗಳದಲ್ಲಿ ಪರಸ್ಪರ ಮುಖಾಮುಖಿಯಾದರು. ತಕ್ಷಣ ಓಡೋಡಿ ಹೋದ ಈಶ್ವರಪ್ಪ ಸೋಮಣ್ಣನವರನ್ನು ಗಟ್ಟಿಯಾಗಿ ತಬ್ಬಿಕೊಂಡರಲ್ಲದೆ ಅಯ್ಯೋ, ನಮ್ಮೊಟ್ಟಿಗೆ ನೀನು ಬಂದ್ಯಾ, ಬಾ, ಒಟ್ಟಿಗೆ ಕಲೆತು ಮಾತಾಡೋಣ ಎಂದು ಸಮಾಧಾನಪಡಿಸಿದರು. ನೀವು ಕವಿರತ್ನ ಕಾಳಿದಾಸರು ಎಂದು ಸೋಮಣ್ಮ ಈಶ್ವರಪ್ಪ ಕುರಿತಂತೆ ಮಾತಿನ ಚಟಾಕಿ ಹಾರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.