
ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಬಗ್ಗೆ ಅಚ್ಚರಿಯ ಸಮೀಕ್ಷಾ ಫಲಿತಾಂಶವೊಂದು ಹೊರಬಿದ್ದಿದೆ. 2 ದಶಕಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಈ ಸಲವೂ ಗೆಲುವು ಸುಲಭದ ತುತ್ತು ಎಂಬುದು ಈವರೆಗಿನ ಅಭಿಪ್ರಾಯ ವಾಗಿತ್ತು. ಆದರೆ ಸೋಮವಾರ ಪ್ರಕಟವಾದ ಚುನಾವಣಾ ಪೂರ್ವ ಸಮೀಕ್ಷೆಯೊಂದು, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಹುಮತಕ್ಕೆ 92 ಸ್ಥಾನ ಬೇಕಿದೆ.
ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಸಮೀಕ್ಷೆ ಅನ್ವಯ ಬಿಜೆಪಿ 91-99 ಸ್ಥಾನ (ಸರಾಸರಿ 95) ಪಡೆಯಲಿದ್ದರೆ, ಕಾಂಗ್ರೆಸ್‌ಗೆ 78-86 (ಸರಾಸರಿ 82) ಸ್ಥಾನ, ಇತರರಿಗೆ 3-7 ಸ್ಥಾನ ಲಭ್ಯವಾಗಲಿದೆ. ಆದರೂ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಿದೆ.
ಬಿಜೆಪಿಗೆ ಹೊಡೆತ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 61 ಸ್ಥಾನ ಗೆದ್ದಿತ್ತು. ಆ ಲೆಕ್ಕಾಚಾರದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿ ಚಲಾವಣೆಯಾದ ಮತಗಳ ಪೈಕಿ ಬಿಜೆಪಿಗೆ ಶೇ.47ರಷ್ಟು ಸಿಕ್ಕಿದ್ದರೆ, ಕಾಂಗ್ರೆಸ್‌ಗೆ ಶೇ.38 ಮತ ಸಿಕ್ಕಿತ್ತು. ಆದರೆ ಈ ಬಾರಿ ಉಭಯ ಪಕ್ಷಗಳು ಶೇ.43ರಷ್ಟು ಮತ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ನಿರ್ಣಾಯಕರು: ಈ ಬಾರಿ ನಿರ್ಣಾಯಕರು ಎಂದು ಹೇಳಲಾದ ಪಾಟಿದಾರ್ ಸಮುದಾಯದ ಮತದಾರರ ಪೈಕಿ ಶೇ.43ರಷ್ಟು ಜನ ಬಿಜೆಪಿಯನ್ನು ಶೇ.40ರಷ್ಟು ಜನ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದು ಕಳೆದ ಬಾರಿಗಿಂತ ಪಾಟೀದಾರ್ ಸಮುದಾಯ ಈ ಬಾರಿ ಕಾಂಗ್ರೆಸ್ ಕಡೆ ಮುಖ ಮಾಡಿರುವುದರ ಸಂಕೇತ. ಇದೇ ವೇಳೆ ಜಿಎಸ್‌ಟಿ ವಿವಾದದ ಹೊರತಾಗಿಯೂ ಉದ್ಯಮಿಗಳು ಬಿಜೆಪಿಗೆ ತಮ್ಮ ಬೆಂಬಲ ಮುಂದುವರೆಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಎಲ್ಲಿ ಯಾರು ಪ್ರಬಲ: ಮಧ್ಯ ಗುಜರಾತ್ ಮತ್ತು ಪಾಟೀದಾರ್ ಸಮುದಾಯ ಹೆಚ್ಚಿರುವ ಸೌರಾಷ್ಟ್ರ ಪ್ರದೇಶದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಮುನ್ನಡೆ ಹೊಂದಿದೆ. ಆದರೆ ಈ ಭಾಗದಲ್ಲಿ ಬಿಜೆಪಿ ಮತ ಪ್ರಮಾಣ ಇಳಿಕೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ವ್ಯತ್ಯಾಸದ ಹೊಡೆತ: ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಿದ್ದ ಮತಗಳ ನಡುವಣ ವ್ಯತ್ಯಾಸ ಶೇ.9ರಷ್ಟಿತ್ತು. ಅದನ್ನು ತೊಡೆದುಹಾಕಲು ಈ ಬಾರಿ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಪರಿಣಾಮ ಈ ಬಾರಿ ಉಭಯ ಪಕ್ಷಗಳು ಪಡೆಯುವ ಮತ ಪ್ರಮಾಣ ಸಮನಾಗಿರಲಿದೆ. ಹೀಗಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.