ಶಬರಿಮಲೆಗಾಗಿ ಬಿಜೆಪಿ ಹೋರಾಟ ಆರಂಭ

Published : Nov 09, 2018, 07:55 AM IST
ಶಬರಿಮಲೆಗಾಗಿ ಬಿಜೆಪಿ ಹೋರಾಟ ಆರಂಭ

ಸಾರಾಂಶ

ಕೇರಳದಲ್ಲೀಗ ಶಬರಿಮಲೆಯ ಅಯ್ಯಪ್ಪನ ಹೆಸರಿನಲ್ಲಿ ರಥಯಾತ್ರೆ ಪರ್ವ ಆರಂಭವಾಗಿದೆ. ಅಯ್ಯಪ್ಪ ದೇಗುಲಕ್ಕೆ 10-50ರ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೊಟ್ಟ ಸುಪ್ರೀಂಕೋರ್ಟ್‌ ಆದೇಶವನ್ನು ಪ್ರಶ್ನಿಸದೇ ಇದ್ದ ಕೇರಳ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ರಥಯಾತ್ರೆ ಆರಂಭಿಸಿದೆ. 

ಕಾಸರಗೋಡು :  ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಸಿಕ್ಕ ಬಳಿಕ ಸಂಘರ್ಷದ ಗೂಡಾಗಿರುವ ಕೇರಳದಲ್ಲೀಗ ಶಬರಿಮಲೆಯ ಅಯ್ಯಪ್ಪನ ಹೆಸರಿನಲ್ಲಿ ರಥಯಾತ್ರೆ ಪರ್ವ ಆರಂಭವಾಗಿದೆ. ಅಯ್ಯಪ್ಪ ದೇಗುಲಕ್ಕೆ 10-50ರ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೊಟ್ಟ ಸುಪ್ರೀಂಕೋರ್ಟ್‌ ಆದೇಶವನ್ನು ಪ್ರಶ್ನಿಸದೇ ಇದ್ದ ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌, ಗುರುವಾರದಿಂದ ಅಯ್ಯಪ್ಪ ದೇಗುಲ ಸಂಪ್ರದಾಯ ಉಳಿಸುವ ಹೋರಾಟದ ಭಾಗವಾಗಿ ರಾಜ್ಯದಲ್ಲಿ ರಥಯಾತ್ರೆಗೆ ಚಾಲನೆ ನೀಡಿವೆ.

ಕೇರಳ ಬಿಜೆಪಿ ಕೈಗೊಂಡಿರುವ ಶಬರಿಮಲೆ ರಕ್ಷಿಸಿ ಅಭಿಯಾನಕ್ಕೆ ಗುರುವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿದರು. ಕಾಸರಗೋಡು ಸಮೀಪದ ಮಧೂರಿನ ಐತಿಹಾಸಿಕ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಯಡಿಯೂರಪ್ಪ ಅವರು ಇತರ ಮುಖಂಡರೊಂದಿಗೆ ‘ಶಬರಿಮಲೆ ಸಂರಕ್ಷಣ ರಥಯಾತ್ರೆ’ಗೆ ಚಾಲನೆ ಕೊಟ್ಟರು. ಈ ವೇಳೆ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕರ್ನಾಟಕ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೇರಳ ಬಿಜೆಪಿಯ ಅನೇಕ ಮುಖಂಡರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ‘ನಾವು ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಇಲ್ಲ. ಆದರೆ ಜನರ ಭಾವನೆಗಳನ್ನು ಎಲ್ಲರೂ ಗೌರವಿಸಬೇಕು’ ಎಂದರು.

‘ಜನರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ಶಬರಿಮಲೆ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಮಲೆಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ತಣಿಸಲು ಯತ್ನಿಸಬೇಕು’ ಎಂದು ಅವರು ಹೇಳಿದರು.

ಯಾತ್ರೆಯು ನವೆಂಬರ್‌ 13ರವರೆಗೆ ಮುಂದುವರಿಯಲಿದೆ. ಶಬರಿಮಲೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಾತ್ರೆಯು ಜಾಗೃತಿ ಮೂಡಿಸಲಿದೆ. 13ರಂದು ಅಯ್ಯಪ್ಪ ದೇಗುಲ ಸನಿಹದ ಎರುಮೇಲಿ ಎಂಬಲ್ಲಿ ಸಮಾಪನಗೊಳ್ಳಲಿದೆ ಎಂದು ಯಡಿಯೂರಪ್ಪ ನುಡಿದರು.

ಈ ನಡುವೆ, ಕಾಂಗ್ರೆಸ್‌ ಕೂಡ ಸಿಪಿಎಂ ಸರ್ಕಾರ ಹಾಗೂ ಆರೆಸ್ಸೆಸ್‌ನ ಹೋರಾಟದ ವೈಖರಿ ಖಂಡಿಸಿ ಕಾಸರಗೋಡಿನಿಂದ ಪ್ರತ್ಯೇಕ ಯಾತ್ರೆ ಆರಂಭಿಸಿತು. ಇದರ ಜೊತೆಗೆ ಆಲಪ್ಪುಳ, ತಿರುವನಂತಪುರ, ಪಾಲಕ್ಕಾಡ್‌ನಿಂಡಲೂ ಪ್ರತ್ಯೇಕ ರಥಯಾತ್ರೆ ಆರಂಭವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್