ಲೋಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ

By Web DeskFirst Published Jan 10, 2019, 11:18 AM IST
Highlights

ಲೋಕಸಭಾ ಚುನಾವಣೆ ಸಮಿಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸಿಗೆ ಹಿನ್ನಡೆಯಾಗಿದೆ. ಮಹಾಘಠಬಂಧನ್ ರಚಿಸಿಕೊಂಡು ಬಿಜೆಡಿಯನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸಿದ್ದ ವಿಪಕ್ಷ ಪಡೆಯನ್ನು ಸೇರುವುದಿಲ್ಲ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.

ಭುವನೇಶ್ವರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ) ಮಹಾಗಠಬಂಧನ ಜತೆಗೆ ಸೇರುವುದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್‌ನೊಂದಿಗೂ ಕೈಜೋಡಿಸುವುದಿಲ್ಲ ಎಂದು ಬಿಜೆಡಿ ಮುಖ್ಯಸ್ಥರೂ ಆಗಿರುವ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಘೋಷಿಸಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ಮಹಾಗಠಬಂಧನ ಹುಟ್ಟುಹಾಕಲು ಪ್ರಯತ್ನಿಸುತ್ತಿರುವ ನಾಯಕರಿಗೆ ಹಿನ್ನಡೆಯಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ಸಿನಿಂದ ಸಮಾನ ಅಂತರ ಕಾಯ್ದುಕೊಳ್ಳುವ ನೀತಿಯನ್ನು ಪಕ್ಷ ಮುಂದುವರಿಸಲಿದೆ. ಮಹಾಗಠಬಂಧನದಲ್ಲಿ ನಾವು ಒಂದು ಭಾಗವಾಗಿಲ್ಲ ಎಂದು ಬುಧವಾರ ಪಟ್ನಾಯಕ್‌ ಸುದ್ದಿಗಾರರಿಗೆ ತಿಳಿಸಿದರು.

2000ನೇ ಇಸ್ವಿಯಿಂದ ಒಡಿಶಾ ಮುಖ್ಯಮಂತ್ರಿಯಾಗಿರುವ ನವೀನ್‌ ಪಟ್ನಾಯಕ್‌ ಅವರನ್ನು ಮಹಾಗಠಬಂಧನಕ್ಕೆ ಸೆಳೆಯಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿದ್ದವು. ಕಳೆದ ತಿಂಗಳು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಪಟ್ನಾಯಕ್‌ ಅವರನ್ನು ಭುವನೇಶ್ವರದಲ್ಲಿ ಭೇಟಿ ಮಾಡಿ ಭವಿಷ್ಯದ ರಾಜಕೀಯ ನಡೆಗಳ ಕುರಿತು ಚರ್ಚೆ ಮಾಡಿದ್ದರು. ಮಂಗಳವಾರ ದೆಹಲಿಗೆ ಭೇಟಿ ನೀಡಿದ್ದ ನವೀನ್‌ ಅವರನ್ನು ಮಹಾಗಠಬಂಧನ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದಾಗ, ಆ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕು ಎಂದಿದ್ದರು. ಆದರೆ ಬುಧವಾರ ದಿಢೀರ್‌ ನಿರ್ಧಾರ ಪ್ರಕಟಿಸಿ, ಏಕಾಂಗಿಯಾಗಿ ಚುನಾವಣೆಗೆ ಹೋಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರ ಹಾಗೂ 147 ವಿಧಾನಸಭಾ ಕ್ಷೇತ್ರಗಳು ಇವೆ. ಲೋಕಸಭೆ ಚುನಾವಣೆ ಜತೆಗೇ ವಿಧಾನಸಭೆಗೂ ಚುನಾವಣೆ ನಡೆಯಲಿದೆ. 2000ರಿಂದ 2009ರವರೆಗೆ ಬಿಜೆಪಿ ಬೆಂಬಲದೊಂದಿಗೆ ಬಿಜೆಡಿ ಅಧಿಕಾರ ನಡೆಸಿತ್ತು. 2009ರಿಂದ ಏಕಾಂಗಿಯಾಗಿ ಅಧಿಕಾರದಲ್ಲಿದೆ.

click me!