ಬಿಹಾರದಲ್ಲಿ ಎದುರಾಯ್ತು ರಾಜಕೀಯ ಕೋಲಾಹಲ

By Suvarna Web DeskFirst Published Feb 27, 2018, 8:44 AM IST
Highlights

ಇತ್ತೀಚೆಗಷ್ಟೇ ಬಿಹಾರದ ಮುಜಫ್ಫರಪುರ ಜಿಲ್ಲೆಯಲ್ಲಿ 9 ಶಾಲಾ ಮಕ್ಕಳನ್ನು ಬಲಿಪಡೆದ ಬೊಲೆರೋ ವಾಹನವನ್ನು ಇಲ್ಲಿನ ಸ್ಥಳೀಯ ಬಿಜೆಪಿ ಶಾಸಕನೇ ಚಾಲನೆ ಮಾಡಿದ್ದ ಎಂದು ಆರೋಪಿಸಲಾಗಿದೆ

ಪಟನಾ: ಇತ್ತೀಚೆಗಷ್ಟೇ ಬಿಹಾರದ ಮುಜಫ್ಫರಪುರ ಜಿಲ್ಲೆಯಲ್ಲಿ 9 ಶಾಲಾ ಮಕ್ಕಳನ್ನು ಬಲಿಪಡೆದ ಬೊಲೆರೋ ವಾಹನವನ್ನು ಇಲ್ಲಿನ ಸ್ಥಳೀಯ ಬಿಜೆಪಿ ಶಾಸಕನೇ ಚಾಲನೆ ಮಾಡಿದ್ದ ಎಂದು ಆರೋಪಿಸಲಾಗಿದೆ. ವಾಹನ ಚಾಲನೆ ಮಾಡಿದವರು ಬಿಜೆಪಿ ಶಾಸಕ ಮನೋಜ್‌ ಬೈತಾ ಎಂಬುದಾಗಿ ಆಪಾದಿಸಲಾಗಿದ್ದು, ಸದ್ಯ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈತನ್ಮಧ್ಯೆ, ಘಟನೆ ಸಂಬಂಧ ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ನೇತೃತ್ವದಲ್ಲಿ ಸೋಮವಾರ ರಾಜಭವನ ಚಲೋ ನಡೆಸಿದ ಆರ್‌ಜೆಡಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ರಾಜ್ಯದಲ್ಲಿ ಪಾನನಿಷೇಧ ಜಾರಿಯಲ್ಲಿದ್ದರೂ ಬಿಜೆಪಿ ಶಾಸಕ ಕುಡಿದು ಹೇಗೆ ವಾಹನ ಚಲಾಯಿಸಿದ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

ಈ ನಡುವೆ, ಬೊಲೆರೋ ವಾಹನ ಚಲಾಯಿಸಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಮುಖಂಡ ಮನೋಜ್‌ ಬೈತಾ, ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಜತೆಗಿನ ಫೋಟೊಗಳು ಪ್ರತ್ಯಕ್ಷವಾಗಿವೆ. ಆದಾಗ್ಯೂ, ಅಪಘಾತ ಘಟನೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ಆರೋಪಿಗೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಮನೋಜ್‌ ಬೈತಾ ಎಂಬ ಹೆಸರಿನ ಕಾರ್ಯಕರ್ತರಾಗಲೀ ಅಥವಾ ಮುಖಂಡರಾಗಿಲೀ ಪಕ್ಷದಲ್ಲಿ ಇಲ್ಲ ಎಂದು ಬಿಜೆಪಿ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ. 9 ಮಕ್ಕಳ ಸಾವಿಗೆ ಕಾರಣವಾಗಿರುವ ಬೊಲೆರೋ ವಾಹನ ಬಿಜೆಪಿ ಮುಖಂಡನದ್ದು ಎಂಬ ಮಾಹಿತಿ ಸಂಪೂರ್ಣ ಸುಳ್ಳು. ಪೊಲೀಸರು ಮತ್ತು ಸಿಎಂ ಅವರು ಆದೇಶಿಸಿದ ತನಿಖೆಯಿಂದಷ್ಟೇ ವಾಹನದ ಮಾಲೀಕ ಯಾರು ಎಂಬುದರ ಸತ್ಯ ಬಯಲಾಗಿದೆ ಎಂದು ಬಿಜೆಪಿಯ ಬಿಹಾರ ಉಪಾಧ್ಯಕ್ಷ ದೇವೇಶ್‌ ಕುಮಾರ್‌ ತಿಳಿಸಿದ್ದಾರೆ.

ಕಳೆದ ಶನಿವಾರದಂದು ಇಲ್ಲಿನ ಮುಜಾಫ್ಫರ್‌ಪುರ ಜಿಲ್ಲೆಯಲ್ಲಿ ಬೊಲೆರೋ ವಾಹನ ಡಿಕ್ಕಿ ಹೊಡೆದು 9 ಶಾಲಾ ಮಕ್ಕಳು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಆ ವಾಹನವನ್ನು ಸ್ಥಳೀಯ ಬಿಜೆಪಿ ಶಾಸಕನೇ ಚಾಲನೆ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದರು.

click me!