ಯಡಿಯೂರಪ್ಪ ಅವರಿಂದಲೇ ಬಿಗ್ ಆಫರ್ : ರಾಜಕೀಯದಲ್ಲಿ ತಲ್ಲಣ

By Web DeskFirst Published Sep 18, 2018, 11:09 AM IST
Highlights

ಬಿಜೆಪಿ ಸರ್ಕಾರ ರಚನೆಯಾದ ನಂತರ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆಯೂ ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.  ಈ ಕಾರಣಕ್ಕಾಗಿಯೇ ಬಿಜೆಪಿಯ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ತುಂಬಾ ಉತ್ಸಾಹದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು :  ಯಾರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಸೆಳೆಯುತ್ತಾರೋ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂಬ ಆಫರ್‌ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೀಡಿದ್ದಾರಂತೆ!

ತೀರಾ ಅನಿವಾರ್ಯವಾದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆಯೂ ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.  ಈ ಕಾರಣಕ್ಕಾಗಿಯೇ ಬಿಜೆಪಿಯ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ತುಂಬಾ ಉತ್ಸಾಹದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಹಾಲಿ ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೂ ಇದೇ ಆಮಿಷ ಒಡ್ಡಲಾಗಿದ್ದು, ತಮ್ಮೊಂದಿಗೆ ಹೆಚ್ಚು ಶಾಸಕರನ್ನು ಕರೆತರುವ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಬಿಜೆಪಿಯಿಂದ ಹೊರಬಿದ್ದಿದೆ.

ಒಂದು ವೇಳೆ ಎಲ್ಲವೂ ಬಿಜೆಪಿ ಲೆಕ್ಕಾಚಾರದಂತೆ ನಡೆದಲ್ಲಿ ವಾಲ್ಮೀಕಿ ಸಮುದಾಯದ ರಮೇಶ್‌ ಜಾರಕಿಹೊಳಿ ಮತ್ತು ಒಕ್ಕಲಿಗ ಸಮುದಾಯದ ಯೋಗೇಶ್ವರ್‌ ಅವರಿಬ್ಬರೂ ಹೆಚ್ಚಿನ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾದಲ್ಲಿ ಇಬ್ಬರನ್ನೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಬಹುದು. ಇಲ್ಲದಿದ್ದರೆ ರಮೇಶ್‌ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ, ಯೋಗೇಶ್ವರ್‌ ಅವರನ್ನು ಸಚಿವರನ್ನಾಗಿ ಮಾಡುವುದರ ಜೊತೆಗೆ ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಬಹುದು. ಇದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಸಮೀಕರಣಕ್ಕೂ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಎಷ್ಟುಮಂದಿ ಶಾಸಕರು ರಾಜೀನಾಮೆ ನೀಡಿ ಹೊರಬರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಬಿಜೆಪಿ ಕಡೆಯಿಂದ ಸುಮಾರು 20ಕ್ಕೂ ಹೆಚ್ಚು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇದರಲ್ಲಿ ಅಂತಿಮವಾಗಿ ಎಷ್ಟುಮಂದಿ ಹೊರಬರುವ ಮನಸ್ಸು ಮಾಡುತ್ತಾರೆ ಎಂಬುದು ರಾಜೀನಾಮೆ ಪರ್ವ ಆರಂಭವಾದ ನಂತರವೇ ಸ್ಪಷ್ಟವಾಗಲಿದೆ. ಒಂದು ವೇಳೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನವೊಲಿಕೆ ಯತ್ನ ಯಶಸ್ವಿಯಾದಲ್ಲಿ ರಾಜೀನಾಮೆ ನೀಡಬಹುದು ಎನ್ನಲಾಗಿರುವ ಶಾಸಕರ ಸಂಖ್ಯೆಯಲ್ಲಿ ಇಳಿಕೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಜೊತೆಗೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ನಿಂದ ರಾಜೀನಾಮೆ ನೀಡಿ ಬರುವ ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡಲು ಒಪ್ಪಿಕೊಳ್ಳಲಾಗಿದೆ. ಅಲ್ಲದೆ, ಅದಕ್ಕಾಗಿ ಬಿಜೆಪಿಯಿಂದ ಪ್ರಯತ್ನ ನಡೆಸುತ್ತಿರುವ ಒಬ್ಬ ಅಥವಾ ಇಬ್ಬರು ಶಾಸಕರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದು ಪಕ್ಷದ ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

click me!