ಪ್ರತಿಯೊಬ್ಬರ ಮೊಬೈಲ್'ಗೆ ಮೋದಿ 500 ರೂ. ರೀಚಾರ್ಜ್ ಮಾಡಿಸ್ತಾರಂತೆ ?

First Published Jun 26, 2018, 12:58 PM IST
Highlights
  • ಮೋದಿ ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರತಿ ತಿಂಗಳು 500 ರೂ. ಟಾಕ್‌ಟೈಮ್ ಉಚಿತವಾಗಿ ನೀಡುತ್ತಿದ್ದಾರೆ ಎಂಬ ವಾಟ್ಸ್ ಆ್ಯಪ್ ಸಂದೇಶ
  • ಈ ಸಂದೇಶದ ಲಿಂಕ್'ನಿಂದ ಮೊಬೈಲಿಗೆ ವೈರಸ್ ಹರಡುವ ಸಾಧ್ಯತೆ

ಯಾವುದೋ ಪ್ರತಿಷ್ಠಿತ ಕಂಪನಿಯೊಂದು ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ರೀಚಾರ್ಜ್ ಕೊಡುಗೆ ನೀಡುತ್ತಿದೆ ಎಂಬ ನಕಲಿ ಸಂದೇಶಗಳನ್ನು ಕೇಳಿರುತ್ತೀರಿ. ಈಗ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೂ ಅಂಥದ್ದೇ ಸಂದೇಶ ವೈರಲ್ ಆಗುತ್ತಿದೆ.

ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿ ‘ನಿಮ್ಮ ಮೊಬೈಲ್‌ಗೆ ನೀವು ರೀಚಾರ್ಜ್ ಮಾಡುವ ಅಗತ್ಯ ಇಲ್ಲ. ಮೋದಿ ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರತಿ ತಿಂಗಳು 500 ರು. ಟಾಕ್‌ಟೈಮ್ ಉಚಿತವಾಗಿ ನೀಡುತ್ತಿದ್ದಾರೆ’ ಎಂದು ಹೇಳಲಾಗಿದೆ. ಆದರೆ ಇದರೊಂದಿಗೆ ಈ ಸಂದೇಶವನ್ನು 3 ಗ್ರೂಪ್‌ಗಳಿಗೆ ಕಳುಹಿಸಬೇಕೆಂಬ ಷರತ್ತನ್ನೂ ಹಾಕಲಾಗಿದೆ.

ಅದಾದ 5 ನಿಮಿಷದ ಬಳಿಕ ನಿಮ್ಮ ಮೊಬೈಲಿಗೆ ಹಣ ಸಂದಾಯವಾಗಿರುತ್ತದೆ. ಪರಿಶೀಲನೆಗಾಗಿ ಈ ಕೆಳಗಿನ ನಂಬರ್ ಒತ್ತಿ ಎಂದೂ ಕೂಡ ಹೇಳಲಾಗಿದೆ. ಆದರೆ ನಿಜಕ್ಕೂ ಮೋದಿ ಭಾರತೀಯರಿಗೆಲ್ಲಾ 500 ರು. ಉಚಿತ ರೀಚಾರ್ಜ್ ಮಾಡುತ್ತಿದ್ದಾರಾ ಎಂದು ಹುಡುಕ ಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ. 

ನೀವು ಸಂದೇಶದಲ್ಲಿ ಹೇಳಿರುವಂತೆಯೇ ಮೂರು ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಸಂದೇಶವನ್ನು ಕಳುಹಿಸಿದ ಬಳಿಕ ನಿಮ್ಮ ಮೊಬೈಲ್‌ಗೆ 400 ರು. ರೀಚಾರ್ಜ್ ಆಗುವುದಿಲ್ಲ. ಬದಲಿಗೆ, ಇಂತಹ ಸಂದೇಶಗಳು ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಮತ್ತು ಮೊಬೈಲ್‌ಗೆ ವೈರಸ್‌ಗಳು ಸೇರಿ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡಬಹುದು.

ಈ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ನರೇಂದ್ರ ಮೋದಿಯವರ ಹೆಸರಿನಲ್ಲಿ, ಜಿಯೋ, ಅಡಿಡಾಸ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಇಂಥ ನಕಲಿ ಸಂದೇಶಗಳು ಹರಿದಾಡಿವೆ.

[ಕನ್ನಡಪ್ರಭ ಅಂಕಣದ ವೈರಲ್ ಚೆಕ್ ಕಾಲಂ]

click me!