ಡ್ರಗ್ ಸಿಟಿ ಆಗ್ತಿದೆಯಾ ಬೆಂಗಳೂರು..?

Published : Dec 12, 2017, 01:33 PM ISTUpdated : Apr 11, 2018, 12:47 PM IST
ಡ್ರಗ್ ಸಿಟಿ ಆಗ್ತಿದೆಯಾ ಬೆಂಗಳೂರು..?

ಸಾರಾಂಶ

ಮೆಜೆಸ್ಟಿಕ್ ಸಮೀಪದ ಚಿಕ್ಕಲಾಲ್‌'ಬಾಗ್, ಭವಾನಿ ಬಾರ್ ಬಳಿ ಮಾದಕ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಸಮೀಪದಲ್ಲೇ ಉಪ್ಪಾರ ಪೇಟೆ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಕಣ್ಣು ಮುಚ್ಚಿ ಕೂತಿದ್ದಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯರು ಆರೋಪಿಸಿದರು.

ಬೆಂಗಳೂರು(ಡಿ.12): ದಿನದಿಂದ ದಿನಕ್ಕೆ ನಗರದಲ್ಲಿ ರಾಜರೋಷವಾಗಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ, ಮಟ್ಕಾ ದಂಧೆ, ಜೂಜಾಟಕ್ಕೆ ವಿದ್ಯಾರ್ಥಿಗಳು, ಮಕ್ಕಳು, ಬಡವರು ಬಲಿಯಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಸೋಮವಾರ ಮೇಯರ್ ಸಂಪತ್‌'ರಾಜ್ ಅಧ್ಯಕ್ಷತೆಯಲ್ಲಿ ನಡೆದ ಬಿಬಿಎಂಪಿ ವಿಶೇಷ ಮಾಸಿಕ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಸದಸ್ಯರು, ವಿಶೇಷವಾಗಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರೀಕ್ಷಿಸಿದಷ್ಟು ಬಿಗಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಪೂರಕವಾಗಿ ಅನೇಕ ಸಲಹೆಗಳನ್ನು ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಸೇರಿದಂತೆ ನಗರದ ನಾಗರಿಕರು ಎದುರಿಸುತ್ತಿರುವ ಬೇರೆ ಬೇರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಬಿಎಂಪಿ ಸೋಮವಾರ ವಿಶೇಷ ಕೌನ್ಸಿಲ್ ಸಭೆ ಆಯೋಜಿಸಿತ್ತು.

ಮಟ್ಕಾ ಆಡಿಸ್ತಾರೆ: ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಮಾತನಾಡಿ, ಜೆಜೆ ನಗರದಲ್ಲಿ ಗಾಂಜಾ ಮಾರಾಟದ ಜತೆ ಮಟ್ಕಾ ಆಡಿಸಲಾಗುತ್ತಿದೆ. ಕೇರಂ, ಕ್ಲಬ್ ಹೆಸರಲ್ಲಿ ಜೂಜಾಟ ನಡೆಯುತ್ತಿದೆ. ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪೊಲೀಸರು ಬರೋದ್ರಲ್ಲಿ ಮಾಯ: ಕಾಟನ್'ಪೇಟೆಯಲ್ಲಿ ಕೆಲ ಸಣ್ಣ ಮಕ್ಕಳೂ ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಸ್ಥಳಕ್ಕೆ ಬರುವುದರೊಳಗೆ ಮಾಯವಾಗಿರುತ್ತಾರೆ. ತಮ್ಮ ಬರುವಿಕೆ ಬಗ್ಗೆ ಪೊಲೀಸರಿಂದಲೇ ಅವರಿಗೆ ಮಾಹಿತಿ ಬರುತ್ತದೆ ಎನಿಸುತ್ತದೆ ಎಂದು ಸ್ಥಳೀಯ ಸದಸ್ಯ ಡಿ.ಪ್ರಮೋದ್ ಅನುಮಾನ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯೆ ಶಶಿರೇಖಾ ಮಾತನಾಡಿ, ತಮ್ಮ ವಾರ್ಡ್‌ನ ಕಲ್ಪಲ್ಲಿ ಸ್ಮಶಾನದಲ್ಲಿ ನಿತ್ಯ 20ಕ್ಕೂ ಹೆಚ್ಚು ಹುಡುಗರು ಸೇರಿ ಡ್ರಗ್ ಸೇವಿಸುವುದು ಕಂಡುಬರುತ್ತದೆ. ಅಲ್ಲದೆ, ಇತರೆ ಬೇರೆ ಬೇರೆ ಅಪರಾದ ಚಟುವಟಿಕೆಗಳ ಡೀಲಿಂಗ್‌ಗಳೂ ನಡೆಯುತ್ತವೆ. ಈ ಬಗ್ಗೆ ಪೊಲೀಸರು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪಾಲಿಕೆಯ ಜೆಡಿಎಸ್ ಮಾಜಿ ನಾಯಕಿ ರಮೀಳಾ ಉಮಾಶಂಕರ್, ತಮ್ಮ ವಾರ್ಡ್‌ನ ವಿವಿಧೆಡೆ ಮಾದಕ ವ್ಯಸನಿಗಳು ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಕಲ್ಲು ಹೊಡೆಯುವುದು, ಬೈಕ್ ವೀಲಿಂಗ್ ಮಾಡುತ್ತಾರೆ ಎಂದು ದೂರಿದರು.

ಶಾಲೆಗಳೇ ಅಡ್ಡೆ: ವೈಟ್‌'ಫೀಲ್ಡ್‌'ನ ಸರ್ಕಾರಿ ಶಾಲೆಯ ಆವರಣ ಶಾಲಾ ಅವಧಿ ಮುಗಿಯುತ್ತಿದ್ದಂತೆ ನಿತ್ಯ ಮಾದಕ ವ್ಯಸನಿಗಳ ಅಡ್ಡೆಯಾಗುತ್ತಿದೆ. ಸ್ಥಳೀಯ ಡಿಸಿಪಿ ಅವರಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅದೇ ರೀತಿ ರಾಮಮೂರ್ತಿ ನಗರದ ಸರ್ಕಾರಿ ಶಾಲೆ ಮಾದಕ ಮತ್ತು ಮದ್ಯವ್ಯಸನಿಗಳ ಅಡ್ಡೆಯಾಗಿದ್ದು, ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಪೋಷಕರು ನಿತ್ಯ ಆತಂಕದಲ್ಲಿದ್ದಾರೆ ಎಂಬ ದೂರು ಸದಸ್ಯರಿಂದ ಕೇಳಿ ಬಂತು.

ಮೆಜೆಸ್ಟಿಕ್ ಸಮೀಪದ ಚಿಕ್ಕಲಾಲ್‌'ಬಾಗ್, ಭವಾನಿ ಬಾರ್ ಬಳಿ ಮಾದಕ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಸಮೀಪದಲ್ಲೇ ಉಪ್ಪಾರ ಪೇಟೆ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಕಣ್ಣು ಮುಚ್ಚಿ ಕೂತಿದ್ದಾರೆ ಎಂದು ಸ್ಥಳೀಯ ಪಾಲಿಕೆ ಸದಸ್ಯರು ಆರೋಪಿಸಿದರು.

ದೂರು ದಾಖಲಿಸಲು 1 ಕೇಜಿ ಗಾಂಜಾ ಬೇಕಂತೆ: ತಲಘಟ್ಟಪುರ ಮತ್ತು ಕೋಣನಕುಂಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವ ಮತ್ತು ಸೇವಿಸುವ ಹತ್ತಾರು ಜನರನ್ನು ಹಿಡಿದು ಪೊಲೀಸರಿಗೆ ನೀಡಲಾಗಿದೆ. ಆದರೆ, ಸಿಕ್ಕಿಬಿದ್ದವರ ಬಳಿ 50, 100 ಗ್ರಾಂ. ಗಾಂಜಾ ಇದೆ ಎಂಬ ಕಾರಣಕ್ಕೆ ದೂರು ದಾಖಲಿಸುವುದಿಲ್ಲ. ಪೊಲೀಸರು ಕನಿಷ್ಠ 1 ಕೆ.ಜಿ.ಗಾಂಜಾ ಇದ್ದರೆ ಮಾತ್ರ ದೂರು ದಾಖಲಿಸುವುದಾಗಿ ಹೇಳುತ್ತಾರೆ ಎಂದು ಸ್ಥಳೀಯ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ದೂರು ನೀಡಿ: ಮಾದಕ ವಸ್ತು ಮಾರಾಟ ಸೇವನೆಯಂತಹ ಪ್ರಕರಣಗಳು ಕಂಡು ಬಂದರೆ ಟೋಲ್ ಫ್ರೀ ಸಂಖ್ಯೆ 1908ಗೆ ಮಾಹಿತಿ ನೀಡಬಹುದು.

ಪೊಲೀಸ್ ಇಲಾಖೆ ಉತ್ತರ ಏನು?

ಪಾಲಿಕೆ ಸದಸ್ಯರ ಆರೋಪ, ದೂರು, ಅಸಮಾಧಾನಗಳಿಗೆ ಸಭೆಯಲ್ಲಿ ಹಾಜರಿದ್ದ ಸಿಸಿಬಿ ಡಿಸಿಪಿ ರಾಮ್‌ ನಿವಾಸ್ ಸಪೆಟ್ ಇಲಾಖೆ ಪರವಾಗಿ ಉತ್ತರ ನೀಡಿದರು. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆಯಂತಹ ಘಟನೆಗಳ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಗರ ಪೊಲೀಸ್ ಆಯುಕ್ತರು ಪ್ರತಿವಾರ ಎಲ್ಲ ವಿಭಾಗದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆಯುತ್ತಿದ್ದಾರೆ. ಈ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸುವ ಭರವಸೆ ನೀಡಿದರು. ಅಲ್ಲದೆ, ಟ್ರಾಫಿಕ್ ಸಮಸ್ಯೆ, ಟೋಯಿಂಗ್ ವಾಹನಗಳ ಸಿಬ್ಬಂದಿಗಳ ವಿರುದ್ಧದ ದೂರು, ಠಾಣೆಗಳ ಮುಂಭಾಗದ ರಸ್ತೆಗಳಲ್ಲಿ ನಿಲ್ಲಿಸಲಾಗಿರುವ ವಾಹನಗಳ ತೆರವು, ರಸ್ತೆ ಬದಿ ಸೂಕ್ತ ಪಾರ್ಕಿಂಗ್ ವ್ಯವಸ್ತೆ ಸೇರಿದಂತೆ ಸದಸ್ಯರು ನೀಡಿರುವ ಪ್ರತಿಯೊಂದು ದೂರು, ಸಮಸ್ಯೆಗಳ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಸಂಬಂಧ ಪಟ್ಟ ಡಿಸಿಪಿಗಳ ವ್ಯಾಪ್ತಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಮಹಿಳಾ ಸುರಕ್ಷತೆ, ಅಪರಾಧ ಪ್ರಕರಣಗಳು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಭಯಾ ನಿಧಿಯಿಂದ ಅಗತ್ಯ ಅನುದಾನ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!