
ಬೆಂಗಳೂರು(ಮಾ.04): ಜಾಹೀರಾತು ಕಾಣುವುದಿಲ್ಲ ಎಂಬ ಕಾರಣದಿಂದ ಕೆಲ ಕಿಡಿಗೇಡಿಗಳು 30ಕ್ಕೂ ಹೆಚ್ಚು ಮರಗಳನ್ನು ಕಡಿದವರ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ಬಳಿಯ ಕಲಾಮಂದಿರ್ ಸರ್ವೀಸ್ ರಸ್ತೆಯ ಬದಿಯಲ್ಲಿರುವ ಜಾಹೀರಾತು ಫಲಕಗಳು ರಸ್ತೆಗೆ ಸಮರ್ಪಕವಾಗಿ ಕಾಣುವುದಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು 30ಕ್ಕೂ ಹೆಚ್ಚು ಮರಗಳನ್ನು ಬಲಿ ಪಡೆಯಲು ಮುಂದಾಗಿದ್ದಾರೆ. 13 ಮರಗಳನ್ನು ಬುಡದವರೆಗೆ ಕತ್ತರಿಸಲಾಗಿದ್ದು, 17 ಮರಗಳ ಬುಡಕ್ಕೆ ಭಾರಿ ಪ್ರಮಾಣದಲ್ಲಿ ಆಸಿಡ್ ಸುರಿಯಲಾಗಿದೆ. ಈ ಪೈಕಿ ಈಗಾಗಲೇ 14 ಮರಗಳು ಸಂಪೂರ್ಣವಾಗಿ ಜೀವ ಕಳೆದುಕೊಂಡಿದ್ದು, ಮೂರು ಮರಗಳು ಮಾತ್ರ ಚಿಕಿತ್ಸೆ ಸ್ಪಂದಿಸುತ್ತಿವೆ.
ಮರಗಳನ್ನು ಕೊಲ್ಲಲು ವಿಷ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಜಾಹೀರಾತು ಫಲಕಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಬಿಬಿಎಂಪಿಯಿಂದ 4-5 ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಗಿಡಗಳನ್ನು ನೆಡಲಾಗಿತ್ತು. ಮಹಾಗನಿ, ಹೊಂಗೆ ಸೇರಿದಂತೆ ಹಲವು ಪ್ರಬೇಧದ ಮರಗಳನ್ನು ಕಡಿಯಲಾಗಿದೆ. ರಾತ್ರೋ ರಾತ್ರಿ ಖಾಸಗಿ ವ್ಯಕ್ತಿಗಳು ಮರಗಳನ್ನು ಕತ್ತರಿಸಿದ್ದಾರೆ. ಮರಗಳನ್ನು ಕತ್ತರಿಸಲು ಹಲವು ದಿನಗಳು ಕಳೆದಿದೆ. ಆದರೆ, ವೃಕ್ಷ ತಜ್ಞರು ಅಧಿಕಾರಿಗಳಿಗೆ ಮಾಹಿತಿ ನೀಡುವವರೆಗೂ ಅಧಿಕಾರಿಗಳು ಈ ಕಡೆಯ ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಾಹೀರಾತು ಮಾಫಿಯಾದವರಿಗೆ ಪಾಲಿಕೆಯ ಅಧಿಕಾರಿಗಳು ಸಹ ಸಹಕಾರ ನೀಡಿರುವ ಸಂಶಯವಿದ್ದು, ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು’’ ಎಂದು ವಾಹನ ಸವಾರ ಮಹದೇವ್ ಅವರು ಒತ್ತಾಯಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಈ ಮಾರ್ಗದಲ್ಲಿ ಸಂಚರಿಸುವ ವೇಳೆ ಮರಗಳು ದಿನೇ ದಿನೇ ಒಣಗುತ್ತಿರುವುದನ್ನು ಗಮನಿಸಿದ ವೃಕ್ಷ ವೈದ್ಯ ವಿಜಯ್ ನಿಶಾಂತ್ ಅವರು ಮರಗಳನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮರಗಳಿಗೆ ಚಿಕಿತ್ಸೆ ನೀಡಲು ಮುಂದಾದಾಗ ಬುಡಕ್ಕೆ ಭಾರಿ ಪ್ರಮಾಣದಲ್ಲಿ ಆಸಿಡ್ ಸುರಿದಿರುವುದು ತಿಳಿದುಬಂದಿದೆ. ಮೂರು ಮರಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು ಸತತ ಎರಡು ದಿನಗಳಿಂದ ವಿಜಯ್ ಅವರ ತಂಡ ಮರಗಳನ್ನು ಉಳಿಸುವ ಕಾರ್ಯದಲ್ಲಿ ನಿರಂತರವಾಗಿದ್ದಾರೆ.
ಕಿಡಿಗೇಡಿಗಳು 17 ಮರಗಳಿಗೆ ಭಾರೀ ಪ್ರಮಾಣದಲ್ಲಿ ಆಸಿಡ್ ಹಾಕಿದ್ದು ಈಗಾಗಲೇ 14 ಮರಗಳು ಜೀವ ಕಳೆದುಕೊಂಡಿವೆ. ಉಳಿದ ಮೂರು ಮರಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸಿಡ್ ಹಾಕಲಾಗಿದ್ದ ಭಾಗದಲ್ಲಿದ್ದ ಪದರವನ್ನು ತೆಗೆಯಲಾಗಿದ್ದು, ನೀರು ಹಾಕಲಾಗಿದೆ. ಮರ ಚಿಕಿತ್ಸೆಗೆ ಸ್ಪಂದಿಸುವ ಆಧಾರದ ಮೇಲೆ ಚಿಕಿತ್ಸೆ ಮುಂದುವರಿಸಲಾಗುವುದು- ವಿಜಯ್ ನಿಶಾಂತ್, ವೃಕ್ಷ ತಜ್ಞ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.