
ಬೆಂಗಳೂರು (ಡಿ.26): ಲಾಲ್‌ಬಾಗ್‌ನಲ್ಲಿ ಕುಟಂಬದೊಂದಿಗೆ ಸೆಲ್ಫಿ ಫೋಟೊ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವಘಡ ಸಂಭವಿಸಿ ಆರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ. ಕ್ಷಣಾರ್ಧದಲ್ಲಿ ಕಣ್ಣೆದುರೆ ಮಗು ಸಾವನ್ನಪ್ಪಿದ್ದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಶ್ರೀರಾಮಪುರ ನಿವಾಸಿಗಳಾದ ಕುಮಾರ್ ಹಾಗೂ ರೇವತಿ ದಂಪತಿಯ ಪುತ್ರ ವಿಕ್ರಮ್ (6)ಮೃತಪಟ್ಟ ಮಗು. ಮೃತ ವಿಕ್ರಮ್ ತನ್ನ ಅತ್ತೆ ಈಶ್ವರಿ ಹಾಗೂ ಅವರ ಪುತ್ರಿ ಮಿಥಿಲಾ ಮತ್ತು ಮಗುವಿನ ಚಿಕ್ಕಪ್ಪನ ಮಕ್ಕಳಾದ ಉದಯ್ ಹಾಗೂ ರಕ್ಷಿತ್ ಜತೆ ಸೋಮವಾರ ಬೆಳಗ್ಗೆ 10 ಗಂಟೆ ವೇಳೆ ಲಾಲ್‌ಬಾಗ್‌ಗೆ ಸುತ್ತಾಡಲು ಬಂದಿದ್ದರು. ಮಧ್ಯಾಹ್ನ ಊಟ ಮುಗಿಸಿದ ಬಳಿಕ 2.30 ರ ಸುಮಾರಿಗೆ ಬೋನ್ಸಾಯ್ ಪಾರ್ಕ್‌ಗೆ ತೆರಳಿದ್ದಾರೆ.
ನಡೆದದ್ದೇನು?
ಬೋನ್ಸಾಯ್ ಪಾರ್ಕ್‌ಗೆ ಬಂದಾಗ ಇಲ್ಲಿನ ಕೆಂಪೇಗೌಡ ಗೋಪುರದ ಪ್ರದೇಶದಲ್ಲಿರುವ ಜಾಗದಲ್ಲಿ ಮಗವನ್ನು ಆಟವಾಡಲು ಬಿಟ್ಟಿದ್ದರು. ಇನ್ನೇನು ಹೊರಡಬೇಕು ಎನ್ನುವ ಸಂದರ್ಭದಲ್ಲಿ ಚೌಕಾಕಾರದಂತಿರುವ ಕಲ್ಲಿನ ಮೇಲೆ ನಿಲ್ಲಿಸಿರುವ ಕಲ್ಲಿನ ಪಿಲ್ಲರ್ ಮೇಲೆ ಅಳವಡಿಸಿರುವ ವೃತ್ತಕಾರದ ಮಾದರಿಯಲ್ಲಿರುವ ಗುಂಡುಕಲ್ಲಿನ (ಪಕ್ಷಿಗಳು ನೀರು ಕುಡಿಯಲು ಮಾಡಿರುವ ವ್ಯವಸ್ಥೆ) ಮೇಲೆ ಮಗುವನ್ನು ಕೂರಿಸಿದ್ದಾರೆ. ಈ ವೇಳೆ ವಿಥಿಲಾ ಅವರು, ತಮ್ಮ ಮೊಬೈಲ್‌ನಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಚಿತ್ರ ಸೆರೆ ಹಿಡಿಯುವ ಸಂದರ್ಭದಲ್ಲಿ ಮಗು ಸರಿಯಾಗಿ ಪೋಸ್ ನೀಡಿಲ್ಲ. ಆಗ ವಿಕ್ರಮ್ ಅತ್ತೆ ಈಶ್ವರಿ ಅವರು ಮಗುವನ್ನು ಸರಿಯಾಗಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೂ ಮಗು ಚೇಷ್ಟೆ ಮಾಡುತ್ತಿತ್ತು. ಕೊನೆಗೆ ಹೇಗಾದರೂ ಫೋಟೋ ಬರಲಿ ಎಂದ ವಿಥಿಲಾ ಅವರು ಸೆಲ್ಫಿ ತೆಗೆಯುತ್ತಿದ್ದರು. ಈ ವೇಳೆ ಮೃತ ಮಗು ಕಲ್ಲಿನ ಮೇಲೆ ನಿಂತು ಹೂ ಕೀಳಲು ಯತ್ನಿಸಿದೆ. ಈತ ವಿಥಿಲಾ ಅವರು ಮಗುವಿಗೆ ಈತ ಫೋಸ್ ಕೊಡು ಎನ್ನುತ್ತಾ ಆಕಸ್ಮಿಕವಾಗಿ ಕಲ್ಲಿಗೆ ಕೈ ತಗುಲಿಸಿದ್ದಾರೆ.
ಮೊದಲೇ ಸಡಿಲಗೊಂಡಿದ್ದ ವೃತ್ತಕಾರದ ಕಲ್ಲು ಆಯಾ ತಪ್ಪಿ ಕೆಳಗೆ ಬಿದಿದ್ದೆ. ಇದೇ ಸಮಯಕ್ಕೆ ಮಗು ಕೂಡ ಕೆಳಗೆ ಬಿದಿದ್ದು, ಮಗುವಿನ ತೆಲೆಯ ಹಿಂಭಾಗದ ಮೇಲೆ ವೃತ್ತಕಾರದ ಕಲ್ಲು ಬಿದಿದೆ. ತೀವ್ರ ರಕ್ತಸ್ರಾವಗೊಂಡ ಮಗವನ್ನು ಕಂಡ ಪೋಷಕರು ಒಮ್ಮೆಲೆ ಕಿರಾಡಿದ್ದಾರೆ. ಆದರೂ ಯಾರು ಸಹಾಯಕ್ಕೆ ಬರಲಿಲ್ಲ, ಕೆಲವರು ಪಾರ್ಕ್ ಹೊರ ಬದಿಯಲ್ಲಿ ನಿಂತು ವಿಡೀಯೋ ಮಾಡುತ್ತಿದ್ದರು. ಈತ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರಪ್ಪ, ಕಾಳೇಗೌಡ ಹಾಗೂ ಗೋಪಿ ಕೂಡಲೇ ಸ್ಪಂದಿಸಿ, ಗೋಪಿ ಅವರ ಬೈಕ್‌ನಲ್ಲಿ ಲಾಲ್‌ಬಾಗ್ ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಷಯ ತಿಳಿದ ಪೋಷಕರ ಆಕ್ರಂದನ ಹೇಳತೀರದಾಗಿತ್ತು. ಈ ಸಂಬಂಧ ಪ್ರಕರಣ ದಾಖಸಿಕೊಂಡಿರುವ ಸಿದ್ದಾಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಗು ಕೂರಿಸಬೇಡಿ
ಮಗುವಿನ ಜತೆ ಫೋಟೋ ತೆಗೆದುಕೊಳ್ಳುತ್ತಿದ್ದ ಪೋಷಕರನ್ನು ಗಮನಿಸಿದ ಪಾರ್ಕ್‌ನ ಮಾಲಿಗಳು, ಮಗುವನ್ನು ಕಲ್ಲಿನ ಮೇಲೆ ಕೂರಿಸಬೇಡಿ. ಆಗೆಲ್ಲ ಮಾಡಬಾರದು. ಏನಾದರು ಅನಾಹುತವಾದರೆ ಯಾರು ಹೊಣೆ ಎಂದು ಮೊದಲೇ ಎಚ್ಚರಿಸಿದ್ದಾರೆ. ಇದನ್ನು ನಿರ್ಲಕ್ಷಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಅಗಾಂಗ ದಾನ
ನಮ್ಮ ಮಗನನ್ನು ಬೇರೆ ಮಕ್ಕಳಲ್ಲಿ ಕಾಣಲು ಬಯಸುತ್ತೇವೆ. ವಿಕ್ರಮ್‌ನ ಕಣ್ಣು, ಹೃದಯ, ಕಿಡ್ನಿ ದಾನ ಮಾಡುತ್ತೇವೆ. ಅದನ್ನು ಕಸಿ ಮಾಡಿಸಿಕೊಂಡ ಮಗುವಾದರು ಹತ್ತಾರು ವರ್ಷ ಚೆನ್ನಾಗಿ ಬಾಳಲಿ ಎಂದು ಹೇಳುವಾಗ ಮೃತ ವಿಕ್ರಮ್ ಅವರ ದೊಡ್ಡಪ್ಪ ವೇಲು ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.
ಮಗುವಿನ ಪೋಷಕರೇ ಕಲ್ಲಿನ ಮೇಲೆ ಕೂರಿಸಿ ಆಟವಾಡುತ್ತಿದ್ದರು. ಕಲ್ಲಿನ ಮೇಲೆ ಕೂತಿದ್ದ ಮಗು ಹೂ ಕೀಳಲು ಹೋದಾಗ ಆಯತಪ್ಪಿ ಮಗು ಬಿದಿದ್ದು, ಆದೇ ವೇಳೆ ಕಲ್ಲು ಬಿದ್ದು ಮಗು ಸಾವನ್ನಪ್ಪಿದೆ. ಇದರಿಂದ ನಮಗೂ ನೋವಾಗಿದೆ.
-ಚಂದ್ರಶೇಖರ್, ಲಾಲ್‌ಬಾಗ್‌ನ ಉಪ ನಿರ್ದೇಶಕ
ಮಗು ಗಾಯಗೊಂಡ ಬಳಿಕ ಕೂಡಲೇ ಬಂದು, ಸಾರ್ವಜನಿಕರೊಬ್ಬರ ಸಹಾಯ ಪಡೆದು ನನ್ನ ಬೈಕ್‌ನಲ್ಲೇ ಕರೆದುಕೊಂಡು ಸೌತ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದೇವು. ಚಿಕಿತ್ಸೆ ನೀಡಿದ ವೈದ್ಯರರು ಮಗು ಮೃತಪಟ್ಟಿದೆ ಎಂದರು.
-ಗೋಪಿ, ಪಾರ್ಕ್‌ನ ನಿರ್ವಹಣೆ ಮಾಡುವರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.