
ಬೆಂಗಳೂರು (ಫೆ. 21): ಬಡವರಿಗಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಊಟ ಬಿಬಿಎಂಪಿ ಸದಸ್ಯರಿಗೆ ರುಚಿಸುತ್ತಿಲ್ಲ ಎಂಬುದು ಇದೀಗ ಸ್ಪಷ್ಟಗೊಂಡಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಹಾಗೂ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟಬಿಂಬಿಸಲು ಕೌನ್ಸಿಲ್ ಸಭೆ ವೇಳೆ ಎಲ್ಲ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟವನ್ನೇ ಪೂರೈಸಲು ಮುಂದಾಗಿದ್ದ ಬಿಬಿಎಂಪಿ, ಇದೀಗ ತಕ್ಷಣ ಇದಕ್ಕೆ ಇತಿಶ್ರೀ ಹಾಡಿದೆ.
ಬಜೆಟ್ ಮೇಲಿನ ಚರ್ಚೆಗಾಗಿ ಆರಂಭವಾದ ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟ ಬರಲಿಲ್ಲ. ಬದಲಿಗೆ ಖಾಸಗಿ ಹೋಟೆಲ್‌ನಿಂದ ಮಾಂಸಾಹಾರಿ ಮತ್ತು ಸಸ್ಯಾಹಾರಿ ಊಟ ತರಿಸಲಾಗಿತ್ತು. ಈ ಬಾರಿಯ ಬಜೆಟ್ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಈ ಊಟದ ವ್ಯವಸ್ಥೆ ಮಾಡಿದ್ದರು.
ಮೂಲಗಳ ಪ್ರಕಾರ ಇಂದಿನ ಸಭೆಗೆ ನೂತನ ಆಡಳಿತದ ಪಕ್ಷದ ನಾಯಕ ಅಬ್ದುಲ್ ವಾಜಿದ್ ಊಟದ ವ್ಯವಸ್ಥೆ ಮಾಡಲಿದ್ದಾರೆ. ಅದೇ ರೀತಿ, 3 ನೇ ದಿನದ ಸಭೆಯಲ್ಲಿ ಸ್ವತಃ ಮೇಯರ್ ಅಥವಾ ಉಪಮೇಯರ್ ಊಟ ಆಯೋಜಿಸಲಿದ್ದಾರೆ.
ಕೌನ್ಸಿಲ್ ಸಭೆ ವೇಳೆ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ ಆರಂಭಿಸಲಾಗಿತ್ತು. ಇದಕ್ಕೆ ಹಲವು ಸದಸ್ಯರು ಪರೋಕ್ಷವಾಗಿ, ಕೆಲವರು ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಹೋಟೆಲ್‌ನಿಂದ ಊಟ ತರಿಸಿಕೊಂಡು ಸ್ಥಾಯಿ ಸಮಿತಿ ಕಚೇರಿಗಳಲ್ಲಿ ಕೂತು ಊಟ ಮಾಡಿದ್ದೂ ಉಂಟು.
ತಿಂಗಳಿಗೆ ಒಂದೆರಡು ಕೌನ್ಸಿಲ್ ಸಭೆಗಳು ನಡೆಯುತ್ತದೆ. ಒಂದೊಂದು ಸಭೆಗೆ ಪ್ರತಿ ಸ್ಥಾಯಿ ಸಮಿತಿಯಿಂದ ಊಟದ ವ್ಯವಸ್ಥೆ ಮಾಡಲಿ ಎಂಬ ಬೇಡಿಕೆಯನ್ನು ಸದಸ್ಯರು ಮೇಯರ್ ಮುಂದಿಟ್ಟರು ಎಂದು ಹೇಳಲಾಗಿದೆ.
ಆದರೆ, ಕಾಂಗ್ರೆಸ್ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್ ಊಟವನ್ನು ನಮ್ಮ ಪಕ್ಷದ ಸದಸ್ಯರೇ ತಿರಸ್ಕರಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಮೇಯರ್ ಗಂಗಾಂಬಿಕೆ ಈ ಬೇಡಿಕೆಗೆ ಒಪ್ಪಿಗೆ ನೀಡಿರಲಿಲ್ಲ. ಇಂದಿರಾ ಕ್ಯಾಂಟೀನ್ ಊಟವನ್ನು ಪೂರೈಕೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಹೀಗಾಗಿ ಪಾಲಿಕೆ ಸಭೆ ನಡೆಯುವಾಗ 12 ಸ್ಥಾಯಿ ಸಮಿತಿ ಅಧ್ಯಕ್ಷರು ಸರದಿಯಂತೆ ಊಟದ ವ್ಯವಸ್ಥೆ ಮಾಡಲು ಒತ್ತಡವನ್ನು ಪಾಲಿಕೆ ಸದಸ್ಯರು ತಂದಿದ್ದು, ಅದು ಈ ಸಭೆಯಿಂದ ಚಾಲ್ತಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.