
ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲುಸೇತುವೆವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಜಾಗೃತರಾಗುತ್ತಿರುವ ನಗರದ ಜನತೆ, ಅ.16ರಂದು ಭಾನುವಾರ ಬೀದಿಗಿಳಿಯಲು ನಿರ್ಧರಿಸಿದ್ದಾರೆ.
ನಮ್ಮ ಬೆಂಗಳೂರು ಪ್ರತಿಷ್ಠಾನ ನೇತೃತ್ವ ವಹಿಸಿರುವ ಮಾನವ ಸರಪಳಿ ರಚನೆಗೆ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಮುಖ ನಾಗರಿಕ ಸಂಸ್ಥೆಗಳು ಕೈಜೋಡಿಸಿವೆ. ಸಿಫೋಸ್, ಸಿವಿಕ್, ಆವಾಜ್, ಬಸ್ ಪ್ರಯಾಣಿಕರ ವೇದಿಕೆ, ಬ್ರೇಸ್ ಮತ್ತು ಹಲವಾರು ನಿವಾಸಿಗಳ ಸಂಘ ಸಂಸ್ಥೆಗಳು ಹೋರಾಟಕ್ಕಿಳಿದಿವೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಚಾಲುಕ್ಯ ಹೋಟೆಲ್-ಬಾಲಬ್ರೂಯಿ ಕಡೆಯಿಂದ ಪ್ರಾರಂಭವಾಗಿ ಚಾಲುಕ್ಯ ವೃತ್ತ, ಕಾವೇರಿ ಜಂಕ್ಷನ್, ಬಿಡಿಎ ಜಂಕ್ಷನ್ ಮತ್ತು ಮೇಖ್ರಿ ವೃತ್ತದಲ್ಲಿ ನಾಲ್ಕು ಕಡೆ ಮಾನವ ಸರಪಳಿ ರಚಿಸಿ ಹೆಬ್ಬಾಳ ಮೇಲ್ಸೇತುವೆವರೆಗೂ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನ 28 ಶಾಸಕರು ಹಾಗೂ ಎಲ್ಲ ಸಂಸದರಿಗೂ ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದು, ಆಸಕ್ತ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಕೈಜೋಡಿಸುವಂತೆಯೂ ನಮ್ಮ ಬೆಂಗಳೂರು ಪ್ರತಿಷ್ಠಾನ ಮನವಿ ಮಾಡಿದೆ.
ಸ್ವಾಧೀನಕ್ಕೆ ಮೊದಲೇ ಗುತ್ತಿಗೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಹಲವು ಯೋಜನೆಗಳು ಭೂ ಸ್ವಾಧೀನವಾಗದೆ ಸ್ಥಗಿತಗೊಂಡ ಉದಾಹರಣೆಗಳಿರುವಾಗಲೇ, ಬಿಡಿಎ ಮತ್ತೊಂದು ಯೋಜನೆಗೆ ಮುಂದಾಗಿದೆ. ಉಕ್ಕಿನ ಸೇತುವೆ ಯೋಜನೆಗೂ ಭೂ ಸ್ವಾಧೀನಕ್ಕೆ ನೋಟಿಸ್ ನೀಡದೇ ಯೋಜನೆ ಘೋಷಿಸಿರುವುದು ಎಷ್ಟುಸರಿ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಸಿಇಎ ಶ್ರೀಧರ ಪಬ್ಬಿಸೆಟ್ಟಿಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಿತ ಉಕ್ಕಿನ ಸೇತುವೆ ಹಾದು ಹೋಗುವ ಮಾರ್ಗದಲ್ಲಿ ಸರ್ಕಾರಿ ಮತ್ತು ಖಾಸಗಿ ಜಾಗವನ್ನು ಗುರುತಿಸದೆಯೇ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಬಿಡಿಎ ನೋಟಿಸ್ ಕೂಡ ನೀಡಿಲ್ಲ. ಜನರ ಅಭಿಪ್ರಾಯವನ್ನೂ ಸಂಗ್ರಹಿಸದೆ, ಅದಕ್ಕೂ ಮುನ್ನವೇ ಕಾಮಗಾರಿಯನ್ನು ಗುತ್ತಿಗೆ ನೀಡಿದೆ ಎಂದು ಹೇಳಿದರು.
ವಿವರಗಳನ್ನು ಗೌಪ್ಯವಾಗಿಸಿಟ್ಟಿರುವುದರಿಂದ ಯೋಜನೆ ಕುರಿತು ಜನರಲ್ಲಿ ಅನುಮಾನ ಮೂಡುತ್ತಿದೆ. ಪೂರ್ಣ ವಿವರವನ್ನು ಬಹಿರಂಗಗೊಳಿಸಿದರೆ ಯೋಜನೆಯ ಸತ್ಯಾಸತ್ಯತೆ ತಿಳಿಯಲಿದೆ. ಅಲ್ಲದೆ, ಹೆಬ್ಬಾಳದಲ್ಲಿ ಮತ್ತೆ ವಾಹನ ದಟ್ಟಣೆ ಉಂಟಾಗಲಿದೆಯೇ ಎಂಬುದನ್ನು ಸಹ ಬಿಡಿಎ ಅರಿತಿಲ್ಲ. ಶೇ.30ರಿಂದ ಶೇ.40ರಷ್ಟುಯೋಜನಾ ವೆಚ್ಚ ಹೆಚ್ಚಳವಾಗಿದ್ದರೂ ಮರು ಮಾತನಾಡದೆ ಗುತ್ತಿಗೆ ನೀಡಿದೆ. ಕಾಂಕ್ರೀಟ್ ಸೇತುವೆಗಿಂತ ಉಕ್ಕಿನ ಸೇತುವೆ ನಿರ್ವಹಣಾ ವೆಚ್ಚವೂ ಹೆಚ್ಚಳವಾಗಲಿದೆ. ಬಿಡಿಎ ಯೋಜನೆ ಆಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಾಸ್ತುಶಿಲ್ಪ ತಜ್ಞ ನರೇಶ್ ನರಸಿಂಹನ್ ಮಾತನಾಡಿ, ಕುಮಾರಕೃಪಾ ರಸ್ತೆಯನ್ನು ಒನ್ ವೇ ಮಾಡಲಿ, ಕಾವೇರಿ ಜಂಕ್ಷನ್ ಮ್ಯಾಜಿಕ್ ಬಾಕ್ಸ್ ಒಡೆದುಹಾಕಿ ಅಲ್ಲೊಂದು ಮಿನಿ ಮೇಲ್ಸೇತುವೆ ನಿರ್ಮಿಸಲಿ ಎಂದು ಸಲಹೆ ನೀಡಿದ ಅವರು, ವಿಧಾನಸೌಧದ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಕಟ್ಟಡಗಳನ್ನು ಒಡೆಯಲು ಸಾಧ್ಯವಿಲ್ಲ. ಹೀಗಿದ್ದೂ ಚಾಲುಕ್ಯ ವೃತ್ತದಲ್ಲಿ ಹೇಗೆ ಕಾಮಗಾರಿ ಪ್ರಾರಂಭಿ ಸುತ್ತಾರೆ ಎಂದರು. ಪ್ರಕಾಶ್ ಬೆಳವಾಡಿ, ಪ್ರಿಯಾ ಚೆಟ್ಟಿರಾಜಗೋಪಾಲ್, ಶ್ರೀನಿವಾಸ ಅಲವಿಲ್ಲಿ ಮತ್ತು ರಾಮದಾಸ ರಾವ್ ಉಪಸ್ಥಿತರಿದ್ದರು.
ಪರ್ಯಾಯ ಮಾರ್ಗ ಕೋರಿ ಸಿಎಂಗೆ ಪತ್ರ: ಉಕ್ಕಿನ ಸೇತುವೆ ನಿರ್ಮಾಣ ವಿರೋಧಿಸಿ ನಗರದ ಜನರು ಬೀದಿಗಿಳಿದಿದ್ದು, ತೆರಿಗೆದಾರರ ಹಣದಲ್ಲಿ ನಿರ್ಮಿಸುತ್ತಿರುವ ಯೋಜನೆಯಲ್ಲಿ ಸರ್ಕಾರ ಸೂಕ್ಷ್ಮಮತಿ, ಜವಾಬ್ದಾರಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುವಂತೆ ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
ಜನಸಾಮಾನ್ಯರ ತೆರಿಗೆ ಹಣದಲ್ಲಿ ನಿರ್ಮಿಸುತ್ತಿರುವ ಯೋಜನೆಗೆ ಜನರ ಅಭಿಪ್ರಾಯವನ್ನೇ ಸಂಗ್ರಹಿಸಿಲ್ಲ. ಬೃಹತ್ ಪ್ರಮಾಣದ ಹಣವನ್ನು ವಿನಿಯೋಗಿಸುವ ವೇಳೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಈ ನಡುವೆ 812 ಮರಗಳನ್ನು ಕಡಿಯಬೇಕಾಗುತ್ತದೆ. ಪ್ರತಿ ಮರಕ್ಕೆ 10 ಸಸಿಗಳನ್ನು ನೆಡುತ್ತೇವೆ ಎಂದು ಬಿಡಿಎ ಹೇಳಿರುವುದು ಶುದ್ಧ ಸುಳ್ಳು. ಬೆಂಗಳೂರು-ಮೈಸೂರು ರಸ್ತೆ ವಿಸ್ತರಣೆ ಮುನ್ನ ‘‘ಅಲ್ಲಿನ ಪ್ರದೇಶ ದೇಶದಲ್ಲಿಯೇ ಸುಂದರವಾದ ತಾಣಗಳಲ್ಲೊಂದು. ತುಂಬಾ ಪ್ರಶಾಂತವಾಗಿದೆ'' ಎಂದು ಲೇಖಕ ಖುಷ್ವಂತ್‌ಸಿಂಗ್ ಬಣ್ಣಿಸಿದ್ದರು. ಆದರೂ ಅಲ್ಲಿನ ಮರಗಳನ್ನು ಕಡಿಯುವ ವೇಳೆಯೂ ಇದೇ ಭರವಸೆ ನೀಡಲಾಗಿತ್ತು. 1 ಮರಕ್ಕೆ 10 ಸಸಿಗಳನ್ನು ನೆಡುತ್ತೇವೆ ಎಂದಿದ್ದರು. ಆ ಭರವಸೆಯೇ ಈವರೆಗೆ ಈಡೇರಿಲ್ಲ. ಹೀಗಾಗಿ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಸುರೇಶ್‌ಕುಮಾರ್ ಸಿಎಂಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
ಅನುಪಯುಕ್ತ ಮೇಲ್ಸೇತುವೆ, ಅಂಡರ್'ಪಾಸ್: ನಗರದಲ್ಲಿ ಪರಿಸರ ಪ್ರೇಮಿಗಳ ವಿರೋಧದ ನಡುವೆಯೂ ನಿರ್ಮಿಸಿದ ಬಸವನಗುಡಿ ಪೊಲೀಸ್ ಠಾಣೆಯ ಸಮೀಪದ ಟ್ಯಾಗೋರ್ ವೃತ್ತದ ಅಂಡರ್‌ಪಾಸ್ ಹಾಗೂ ನ್ಯಾಷನಲ್ ಕಾಲೇಜು ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸಾಕಷ್ಟುಮರಗಳನ್ನು ತೆರವುಗೊಳಿಸಲಾಯಿತು. ಸಂಚಾರ ದಟ್ಟಣೆ ಉಂಟಾಗದ ಈ ಜಂಕ್ಷನ್‌ಗಳಲ್ಲಿ ನಿರ್ಮಿಸಿದ ಅಂಡರ್‌ಪಾಸ್, ಮೇಲ್ಸೇತುವೆ ಅನುಪಯುಕ್ತವಾಗಿದ್ದು, ತೆರಿಗೆದಾರರ ಹಣ ಪೋಲಾಯಿತು ಎಂಬ ಭಾವನೆ ಬಹಳಷ್ಟುಜನರಲ್ಲಿ ಈಗಲೂ ಇದೆ.
ಈ ಎರಡೂ ಯೋಜನೆಗಳಿಗೆ ಪರಿಸರ ಪ್ರೇಮಿಗಳು, ಸ್ಥಳೀಯ ನಿವಾಸಿಗಳು, ಸಂಘ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ವಿರೋಧದ ನಡುವೆಯೂ ಕಾಮಗಾರಿ ಕೈಗೊಳ್ಳಲಾಗಿತ್ತು. ಟ್ಯಾಗೋರ್ ವೃತ್ತದಲ್ಲಿರುವ ಅಂಡರ್‌ಪಾಸ್ ಮೇಲಿನ ಜಾಗದಲ್ಲಿ ಬಸವನಗುಡಿ ಠಾಣೆ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ನಿಲ್ಲಿಸಲು ಸೀಮಿತವಾಗಿದೆ.
ವಿರೋಧಕ್ಕೆ ಮಣಿದ ಉದಾಹರಣೆ ಇದೆ: ಇದೇ ರೀತಿ ಬಸವನಗುಡಿಯ ರಾಮಕೃಷ್ಣ ಆಶ್ರಮ ವೃತ್ತ ಹಾಗೂ ವಿದ್ಯಾಪೀಠ ವೃತ್ತಗಳಲ್ಲಿಯೂ ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿತ್ತು. ಜನರ ವಿರೋಧದಿಂದ ಕೊನೆಯ ಕ್ಷಣದಲ್ಲಿ ಯೋಜನೆಗಳನ್ನು ಕೈಬಿಡಲಾಗಿದೆ. ಹೀಗಿದ್ದರೂ ಈ ಎರಡೂ ಪ್ರದೇಶಗಳಲ್ಲಿ ಎಂದಿನಂತೆಯೇ ಸಂಚಾರ ನಡೆಯುತ್ತಿದೆ.
ತುಕ್ಕು ಹಿಡಿದರೆ ಅಪಾಯ ಖಚಿತ: ಬ್ರಿಟೀಷರ ಕಾಲದಿಂದಲೂ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಕಾಂಕ್ರೀಟ್ ಸೇತುವೆಗಿಂತಲೂ ಕಡಿಮೆ ಅವಧಿಯಲ್ಲಿ ಸೇತುವೆ ನಿರ್ಮಿಸಬಹುದು. ಆದರೆ, ನಿರ್ವಹಣೆ ತುಂಬಾ ಕಷ್ಟವಾಗಲಿದೆ. ಅಸಮರ್ಪಕ ನಿರ್ವಹಣೆಯಿಂದ ತುಕ್ಕು ಹಿಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸಿವಿಲ್ ಏಯ್ಡ್ ಸಂಸ್ಥೆ ಅಧ್ಯಕ್ಷ ಜಯಸಿಂಹ ಎಚ್ಚರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೋಲ್ಕೋತ್ತಾ ಮತ್ತು ದೇಶದ ವಿವಿಧೆಡೆ ಹಲವು ನದಿಗಳಿಗೆ ಅಡ್ಡಲಾಗಿ ಉಕ್ಕಿನ ಸೇತುವೆ ನಿರ್ಮಿಸಿರುವ ಉದಾಹರಣೆಗಳಿವೆ. ತುಂಬಾ ಚಿಕ್ಕದಾದ ರಸ್ತೆಗಳಲ್ಲಿ ಅವಶ್ಯವಿರುವೆಡೆ ಉಕ್ಕಿನ ಸೇತುವೆಗಳನ್ನು ಸಹ ನಿರ್ಮಿಸಿರುವ ಸೇತುವೆಗಳನ್ನು ನೋಡಬಹುದು ಎಂದು ‘ಕನ್ನಡಪ್ರಭ'ಕ್ಕೆ ತಿಳಿಸಿದರು.
ಸುಂದರ ಬೆಂಗಳೂರು ಮತ್ತು 812 ಮರಗಳನ್ನು ಕಡಿಯಬೇಕಿರುವ ದೃಷ್ಟಿಕೋನದಲ್ಲಿ ನೋಡಿದರೆ, ಸರ್ಕಾರ ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು. ಎಷ್ಟುಪ್ರಮಾಣದಲ್ಲಿ ಶಬ್ದ ಉಂಟಾಗಲಿದೆ ಎಂಬುದನ್ನು ತಿಳಿದು ಮುಂದಿನ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದರು.
ಹೆಸರಿಗಷ್ಟೇ ಆಕ್ಷೇಪಣೆ ಸ್ವೀಕಾರ?
ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕುರಿತಂತೆ ಬಿಡಿಎ ಸಾರ್ವಜನಿಕರಿಂದ ಆಕ್ಷೇಪಣೆ, ಅಭಿಪ್ರಾಯ ಆಹ್ವಾನಿಸಿದೆ. ಆದರೆ ಈಗಾಗಲೇ 1791 ಕೋಟಿ ರೂ. ಕಾಮಗಾರಿ ಮೊತ್ತಕ್ಕೆ ಎಲ್ ಆ್ಯಂಡ್ ಟಿ ಮುಂಬೈ ಮತ್ತು ಹೈದರಾಬಾದ್‌ನ ಎನ್‌ಸಿಸಿಎಲ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ಹಾಗಾಗಿ ಬಿಡಿಎ ಆಕ್ಷೇಪಣೆ, ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆಯೇ ಅಥವಾ ಕೇವಲ ನಾಮ್ ಕೇ ವಾಸ್ತೆಯೇ ಎಂಬ ಪ್ರಶ್ನೆ ಮೂಡಿಸಿದೆ. ಬಿಡಿಎ ನೀಡಿರುವ ಇ-ಮೇಲ್‌ಗೆ 300 ಆಕ್ಷೇಪ, ಸಲಹೆಗಳು ಸಲ್ಲಿಕೆಯಾಗಿವೆ. ಅದರಲ್ಲಿ ಶೇ.73ರಷ್ಟುಅಭಿಪ್ರಾಯಗಳು, ಸಲಹೆಗಳು ಯೋಜನೆ ಪರವಾಗಿವೆ ಎಂದು ಬಿಡಿಎ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಈಗಾಗಲೇ ಟೆಂಡರ್ ನೀಡಿರುವುದರಿಂದ ಕಾಮಗಾರಿ ಪ್ರಾರಂಭವಾಗು ವುದಷ್ಟೇ ಬಾಕಿ ಇದೆ. ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ ಎನ್ನು್ನವ ನಗರಾಭಿ ವೃದ್ಧಿ ಸಚಿವರು ಮತ್ತು ಬಿಡಿಎ ಅಭಿಪ್ರಾಯ ಗಳು ಇದಕ್ಕೆ ಪೂರಕವಾಗಿಯೇ ಇದ್ದಂತಿವೆ.
ಸಂಚಾರ ತಜ್ಞರು ಏನಂತಾರೆ?
"ಬೆಂಗಳೂರಿಗೆ ಖಂಡಿತವಾಗಿಯೂ ಉಕ್ಕಿನ ಸೇತುವೆ ಅವಶ್ಯಕತೆ ಇಲ್ಲ. ಅದರ ಬದಲಾಗಿ ಮೆಟ್ರೋ ರೈಲು ಯೋಜನೆಯನ್ನೇ ವಿಸ್ತರಿಸಿದರೆ ಸಾವಿರಾರು ಪ್ರಯಾಣಿಕರು ಸುಖಕರವಾಗಿ ಪ್ರಯಾಣಿಸಬಹುದು. ಯಾವುದೇ ಮೇಲ್ಸೇತುವೆ ನಿರ್ಮಿಸಿದರೂ ಮುಂದಿನ ಮೂರು ವರ್ಷಗಳ ಬಳಿಕ ಮತ್ತೆ ಸಮಸ್ಯೆ ಉದ್ಭವಿಸುತ್ತದೆ. ಉಕ್ಕಿನ ಸೇತುವೆ ಕಾರುಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿದ್ದು, ತೆರಿಗೆದಾರರ ಹಣದಲ್ಲಿ ರಾಜಕಾರಣಿಗಳು ಮತ್ತು ಶ್ರೀಮಂತರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಅಷ್ಟೆ. ನಗರಕ್ಕೆ ಸರಬರಾಜಾಗುವ ಕಾವೇರಿ ನೀರು ಅರ್ಧಕ್ಕರ್ಧ ಪೋಲಾಗುತ್ತಿದೆ. ವಿದ್ಯುತ್ ಸಮಸ್ಯೆ ಜನರನ್ನು ಕಾಡುತ್ತಿದೆ. ಇಂತಹ ದೊಡ್ಡ ಸಮಸ್ಯೆಗಳನ್ನು ಕಡೆಗಣಿಸಿ ಕೇವಲ 6.7 ಕಿ.ಮೀ. ಉದ್ದದ ಉಕ್ಕಿನ ಸೇತುವೆ ಕಾಮಗಾರಿಗೆ ಸರ್ಕಾರವೇಕೆ ಇಷ್ಟುತಲೆಕೆಡಿಸಿಕೊಂಡಿದೆ. ಮೈಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆಯಲ್ಲಿಯೂ ಬಳ್ಳಾರಿ ರಸ್ತೆಯಲ್ಲಿರುವಷ್ಟೇ (ಗಂಟೆಗೆ 25 ಸಾವಿರ ವಾಹನ ಸಂಚಾರ) ಪ್ರಮಾಣದ ವಾಹನ ದಟ್ಟಣೆ ಇದೆ. ಹಾಗಾದರೆ ಎಲ್ಲ ರಸ್ತೆಗಳಲ್ಲಿಯೂ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲಿದೆಯೇ?" ಎಂದು ಸಂಚಾರ ತಜ್ಞ ಶ್ರೀಹರಿ ಪ್ರಶ್ನಿಸುತ್ತಾರೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.