ಕೊಂದೆ ಎಂದ ಪೊಲೀಸರಿಗೆ ಶರಣಾದ ಪತಿ : ವಾಪಸ್ ಬಂದಾಗ ಪತ್ನಿ ಎದುರಿಗೆ ಕುಳಿತಿದ್ದಳು

By Suvarna Web DeskFirst Published Oct 31, 2017, 6:34 PM IST
Highlights

ಮನೆ ಹತ್ತಿರದಲ್ಲೇ ರಘುಗೌಡ ಅವರು, ‘ರಾಘವೇಂದ್ರ ಕಾಂಡಿಮೆಂಟ್ಸ್’ ಹೆಸರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ. ಆದರೆ ವಿವಾಹ ನಂತರ ದಂಪತಿಯಲ್ಲಿ ಅನ್ಯೋನ್ಯತೆ ಮೂಡಲಿಲ್ಲ. ಪ್ರತಿ ದಿನ ಕ್ಷುಲ್ಲಕ ಕಾರಣಗಳಿಗೆಲ್ಲ ಅವರು ಜಗಳವಾಡುತ್ತಿದ್ದು, ಆಗಾಗ್ಗೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದರು.

ಬೆಂಗಳೂರು(ಅ.31): ತಾನು ಹೊಡೆದ ಏಟಿಗೆ ಪತ್ನಿ ಸಾವನ್ನಪ್ಪಿದ್ದಾಳೆ ಎಂದುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾದ ಪತಿ, ನಂತರ ಪೊಲೀಸರೊಂದಿಗೆ ಮನೆಗೆ ತೆರಳಿದರೆ ಪತ್ನಿ ಎದ್ದು ಕುಳಿತಿದ್ದಳು..! ಇಂಥದೊಂದು ಸ್ವಾರಸ್ಯಕರ ಪ್ರಸಂಗ ಪೀಣ್ಯ ಸಮೀಪದ ಚನ್ನನಾಯಕನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಚನ್ನನಾಯಕನಹಳ್ಳಿ ನಿವಾಸಿ ರಘುಗೌಡ ದಂಪತಿಯು ಈ ನಾಟಕೀಯ ಘಟನೆಯ ಕೇಂದ್ರ ಬಿಂದುವಾಗಿದ್ದು, ಸದ್ಯ ಪತಿಯಿಂದ ಹಲ್ಲೆಗೊಳಗಾಗಿರುವ ರಘುಗೌಡನ ಪತ್ನಿ ಪುಷ್ಪಲತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಗಾಯಾಳು ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಏನಿದು ಘಟನೆ?

ವರ್ಷದ ಹಿಂದೆ ನಾಗಮಂಗಲ ತಾಲೂಕಿನ ರಘುಗೌಡ ಹಾಗೂ ಪುಷ್ಪಲತಾ ವಿವಾಹವಾಗಿದ್ದು, ಮದುವೆ ನಂತರ ಚನ್ನನಾಯಕನಹಳ್ಳಿಯಲ್ಲಿ ಅವರು ನೆಲೆಸಿದ್ದಾರೆ. ಮನೆ ಹತ್ತಿರದಲ್ಲೇ ರಘುಗೌಡ ಅವರು, ‘ರಾಘವೇಂದ್ರ ಕಾಂಡಿಮೆಂಟ್ಸ್’ ಹೆಸರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ. ಆದರೆ ವಿವಾಹ ನಂತರ ದಂಪತಿಯಲ್ಲಿ ಅನ್ಯೋನ್ಯತೆ ಮೂಡಲಿಲ್ಲ. ಪ್ರತಿ ದಿನ ಕ್ಷುಲ್ಲಕ ಕಾರಣಗಳಿಗೆಲ್ಲ ಅವರು ಜಗಳವಾಡುತ್ತಿದ್ದು, ಆಗಾಗ್ಗೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದರು. ಅದೇ ರೀತಿ ಸೋಮವಾರ ಸಂಜೆ ಕೂಡ ಬೇಕರಿಯಲ್ಲಿ ಸತಿ-ಪತಿ ಮಧ್ಯೆ ಗಲಾಟೆಯಾಗಿದೆ. ಆ ವೇಳೆ ಅವರ ಮಧ್ಯೆ ಮಾತಿಗೆ ಮಾತು ಬೆಳೆದು

ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಪುಷ್ಪಲತಾ, ಪತಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಕೆರಳಿದ ರಘುಗೌಡ, ಆ ಚಾಕು ಅನ್ನು ಕಸಿದುಕೊಂಡು ಎಸೆದು, ಬಳಿಕ ದೊಣ್ಣೆಯಿಂದ ಪತ್ನಿ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಈ ಹೊಡೆತಕ್ಕೆ ಆಕೆ ಪ್ರಜ್ಞಾಹೀನಳಾಗಿದ್ದಾಳೆ.

ಆದರೆ ಅರ್ಧ ತಾಸು ಕಳೆದರೂ ಪತ್ನಿ ಎಚ್ಚರಗೊಳ್ಳದೆ ಹೋದಾಗ ಭಯಗೊಂಡ ರಘು, ಬಾಗಲಗುಂಟೆ ಠಾಣೆಗೆ ತೆರಳಿ ‘ನನಗೆ ಕಾಟ ಕೊಡುತ್ತಿದ್ದ ನನ್ನ ಪತ್ನಿ ಕೊಂದಿದ್ದೇನೆ’ ಎಂದು ಹೇಳಿ ಶರಣಾಗಿದ್ದಾನೆ. ಈ ವಿಷಯ ತಿಳಿದು ಕೂಡಲೇ ಪೊಲೀಸರು, ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಬೇಕರಿಗೆಯಲ್ಲಿ ಕೊಲೆಯಾಗಿದ್ದ ರಘು ಗೌಡನ ಪತ್ನಿ ದರ್ಶನವಾದ ಕೂಡಲೇ ಪೊಲೀಸರು ಅವಾಕ್ಕಾಗಿದ್ದಾರೆ ಎಂದು ತಿಳಿದು ಬಂದಿದೆ.

ಪತಿಯಿಂದ ಹಲ್ಲೆಗೊಳಗಾಗಿದ್ದ ಪುಷ್ಪಲತಾ, ಪೊಲೀಸರು ಬರುವ ವೇಳೆಗೆ ಹಲ್ಲೆಯಿಂದ ಸಾವರಿಸಿ ಕೊಂಡು ಎದ್ದು ಕುಳಿತಿದ್ದರು. ತಕ್ಷಣವೇ ಪೊಲೀಸರು, ಗಾಯಾಳುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆನಂತರ ಘಟನಾ ನಡೆದ ಸ್ಥಳವು ತಮ್ಮ ವ್ಯಾಪ್ತಿಗೆ ಬಾರದು ಎಂದು ಹೇಳಿ ಪೀಣ್ಯ ಠಾಣೆಗೆ ಬಾಗಲುಗುಂಟೆ ಪೊಲೀಸರು ವರ್ಗಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!