ಬಂಡೀಪುರ : ಮತ್ತೆ ಕೇರಳ ಪರವಾಗಿ ನಿಂತ ರಾಹುಲ್‌

By Kannadaprabha News  |  First Published Oct 5, 2019, 7:38 AM IST

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಇದೀಗ ಕೇರಳ ಸರ್ಕಾರದ ಪರವಾಗಿ ನಿಂತಿದ್ದಾರೆ. 


ಸುಲ್ತಾನ್‌ ಬತ್ತೇರಿ/ಬೆಂಗಳೂರು (ಅ.04) : ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಕನ್ನಡಿಗರ ವಿರೋಧವನ್ನು ಉಪೇಕ್ಷಿಸಿ ಒತ್ತಾಯಿಸುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹುಲಿ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕಿರುವ ನಿಷೇಧ ವಿರುದ್ಧ ಉಪವಾಸ ನಿರತ ಕೇರಳ ಯುವಕರಿಗೆ ಲಭ್ಯವಿರುವ ಕಾನೂನಿನ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.

ಎಐಸಿಸಿಯ ಮಾಜಿ ಅಧ್ಯಕ್ಷರೂ ಆಗಿರುವ ರಾಹುಲ್‌ ಗಾಂಧಿ ನಿಲುವಿಗೆ ಕರ್ನಾಟಕದ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ಮಹದಾಯಿ, ಕಾವೇರಿಯಂತಹ ಅಂತಾರಾಜ್ಯ ಜಲ ವಿವಾದ ಸಂದರ್ಭದಲ್ಲಿ ಕರ್ನಾಟಕದ ಪರ ನ್ಯಾಯಸಮ್ಮತವಾಗಿ ದನಿಯೆತ್ತುವ ಅವಕಾಶವಿದ್ದರೂ ಆ ಬಗ್ಗೆ ಗಮನ ಹರಿಸದ ರಾಹುಲ್‌, ಕರ್ನಾಟಕದ ಬಗ್ಗೆ ಪಕ್ಷಪಾತಿ ಧೋರಣೆ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಬಂಡೀಪುರ ವಿವಾದದ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

undefined

ನೆರವಿನ ಭರವಸೆ:

ಕರ್ನಾಟಕ ಗಡಿಗೆ ಸಮೀಪದಲ್ಲಿರುವ ಕೇರಳದ ಸುಲ್ತಾನ್‌ ಬತ್ತೇರಿಯಲ್ಲಿ ಕಳೆದ 10 ದಿನಗಳಿಂದ ಐವರು ಯುವಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಶುಕ್ರವಾರ ದೆಹಲಿಯಿಂದ ಆಗಮಿಸಿದ ರಾಹುಲ್‌ ಗಾಂಧಿ, ಸತ್ಯಾಗ್ರಹ ನಡೆಯುತ್ತಿರುವ ಫ್ರೀಡಂ ಪಾರ್ಕ್ಗೆ ತೆರಳಿ ಸಮಾಲೋಚನೆ ನಡೆಸಿದರು. ಜೊತೆಗೆ ಉಪವಾಸ ನಿರತ ಯುವಕರನ್ನು ದಾಖಲಿಸಿರುವ ಆಸ್ಪತ್ರೆಗೂ ತೆರಳಿ ಅವರ ಆರೋಗ್ಯ ವಿಚಾರಿಸಿದರು. ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಯನಾಡ್‌ನ ಹಿತರಕ್ಷಣೆಯನ್ನು ಈ ಯುವಕರು ಪ್ರತಿನಿಧಿಸುತ್ತಿದ್ದಾರೆ. ಅವರ ತ್ಯಾಗಕ್ಕೆ ಧನ್ಯವಾದ ಎಂದು ಹೇಳಿದರು.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿವೆ. ಇದರಲ್ಲಿ ರಾಜಕೀಯ ಭಿನ್ನಾಭಿಪ್ರಾಯವಿಲ್ಲ. ಉಪವಾಸ ನಿರತ ಯುವಕರು ಇಲ್ಲಿನ ಜನರ ಬವಣೆಯನ್ನು ಪ್ರತಿನಿಧಿಸುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲೂ ಈ ರೀತಿಯ ನಿಷೇಧ ಇಲ್ಲ ಎಂದು ತಿಳಿಸಿದರು.

ಈ ವಿಚಾರವಾಗಿ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದೇನೆ. ದೇಶದಲ್ಲಿರುವ ಅತ್ಯುತ್ತಮ ಕಾನೂನು ಸಂಪನ್ಮೂಲವನ್ನು ಒದಗಿಸಿಕೊಡುತ್ತೇನೆ. ನಾನು ನಿಮ್ಮಗಳ ಜತೆ ನಿಲ್ಲುತ್ತೇನೆ. ಬುದ್ಧಿವಂತಿಕೆಯಿಂದ, ಸೂಕ್ಷ್ಮವಾಗಿ ಈ ವಿಚಾರದಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.

ಮೈಸೂರು ಮೂಲಕ ಕೇರಳಕ್ಕೆ ಹೋಗುವ ವಾಹನಗಳು ಬಂಡೀಪುರದ ಮುಖೇನ ಸಾಗುತ್ತವೆ. ರಾತ್ರಿ ವೇಳೆ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಕಾರಣ ಈ ರಸ್ತೆಯಲ್ಲಿ ಅಪಘಾತ ಸಂಭವಿಸಿ ಹಲವು ಪ್ರಾಣಿಗಳು ಬಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಕರ್ನಾಟಕ ಹೈಕೋರ್ಟ್‌ ಕೂಡ ಎತ್ತಿ ಹಿಡಿದಿದೆ. ಈ ನಿಷೇಧವನ್ನು ತೆರವುಗೊಳಿಸಲು ಕೇರಳ ಸರ್ಕಾರವು ಕರ್ನಾಟಕದ ಮೇಲೆ ಸಾಕಷ್ಟುಒತ್ತಡ ಹೇರಿತ್ತು. ಆದರೆ ಕರ್ನಾಟಕ ಮಣಿದಿರಲಿಲ್ಲ. ಇದೀಗ ಕೇರಳದ ಸುಲ್ತಾನ್‌ ಬತ್ತೇರಿ ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಯುವಕರು ಉಪವಾಸ ನಡೆಸುತ್ತಿದ್ದಾರೆ. ಅಲ್ಲಿನ ಸಂಸದರೂ ಆಗಿರುವ ರಾಹುಲ್‌ ಗಾಂಧಿ ಬಂಡೀಪುರ ರಾತ್ರಿ ಸಂಚಾರಕ್ಕೆ ಒತ್ತಡ ಹೇರಿರುವುದು ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶಕ್ಕೂ ಗುರಿಯಾಗಿದೆ.

ಕೆಲ ವಾರಗಳ ಹಿಂದೆ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪರ ಮಾತನಾಡಿದ್ದರು. ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೂ ಬೆಂಬಲ ಸೂಚಿಸಿ ಕನ್ನಡಿಗರ ವಿರೋಧವನ್ನು ರಾಹುಲ್‌ ಎದುರಿಸಿದ್ದರು.

click me!