
ಬೆಂಗಳೂರು: ಅಥ್ಲೆಟಿಕ್ಸ್ ಭೂಪಟದಲ್ಲಿ ಭಾರತ ಪ್ರಜ್ವಲಿಸುವಂತೆ ಮಾಡಿದ ಅಥ್ಲೀಟ್‌ಗಳಲ್ಲಿ ಪಿ.ಟಿ.ಉಷಾ ಪ್ರಮುಖರು. ಭಾರತ ಮಾತ್ರವಲ್ಲದೇ ಇನ್ನಿತರ ದೇಶಗಳ ಯುವ ಅಥ್ಲೀಟ್‌ಗಳಿಗೆ ಸ್ಫೂರ್ತಿಯಾಗಿರುವ ಮಾಜಿ ಓಟಗಾರ್ತಿ ಪಿ.ಟಿ.ಉಷಾಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾರೀ ಅವಮಾನವಾಗಿದೆ.
ಹೌದು, ಕಂಠೀರವದಲ್ಲಿ ಉಷಾ ಸೇರಿದಂತೆ ವಿಶ್ವದ ಮಾಜಿ ಅಥ್ಲೀಟ್‌ಗಳ ಭಾವಚಿತ್ರಗಳನ್ನು ತಿಪ್ಪೆಗುಂಡಿಯಲ್ಲಿ ಎಸೆದು ಅಪಮಾನಕ್ಕೀಡು ಮಾಡಿದ್ದಾರೆ. ಇದು ಬರೀ ಅಥ್ಲೀಟ್‌ಗಳಿಗಷ್ಟೇ ಅಲ್ಲ ಇಡೀ ಕ್ರೀಡಾ ವಲಯಕ್ಕೆ ಆಘಾತ ಉಂಟು ಮಾಡಿದೆ. ಇದು ಕ್ರೀಡಾಂಗಣದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಆಗಿರುವುದೇನು?: ರಾಜ್ಯ ಸರ್ಕಾರ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಒಪ್ಪಂದದ ಮೇರೆಗೆ ನೀಡಿದೆ. ಫುಟ್ಬಾಲ್ ಪಂದ್ಯಗಳು ಇಲ್ಲಿ ನಡೆಯುವು ದರಿಂದ ಬೆಂಗಳೂರು ಎಫ್ಸಿ ಪ್ರಚಾರಕ್ಕಾಗಿ ಕ್ರೀಡಾಂಗಣದ ಸುತ್ತ ತಂಡದ ಆಟಗಾರರು ಮತ್ತು ಸಂಸ್ಥೆಯ ಲಾಂಛನಗಳ ಸ್ಟಿಕ್ಕರ್‌ಗಳನ್ನು ಹಾಕಿದೆ.
ಪತ್ರಿಕಾಗೋಷ್ಠಿ ನಡೆಯುವ ಕೋಣೆಯಲ್ಲಿದ್ದ ದಿಗ್ಗಜ ಅಥ್ಲೀಟ್‌ಗಳ ಫೋಟೋಗಳನ್ನು ಕಿತ್ತು ಕಸದ ರಾಶಿಯಲ್ಲಿ ಎಸೆಯುವುದರೊಂದಿಗೆ ಕೇವಲ ಅಥ್ಲೀಟ್‌ಗಳಿಗೆ ಮಾತ್ರವಲ್ಲ ಕ್ರೀಡೆಗೇ ಅವಮಾನಿಸಿದೆ. ಕ್ರೀಡಾಂಗಣದ ಒಂದು ಬದಿಯಲ್ಲಿರುವ ಟೆನಿಸ್ ಕೋರ್ಟ್‌ನ ಪಕ್ಕದಲ್ಲಿ ಬೀಳು ಬಿದ್ದಿರುವ ಜಾಗದಲ್ಲಿ ಸಿಮೆಂಟ್ ಇಟ್ಟಿಗೆಗಳು, ಟಾಯ್ಲೆಟ್ ಬೇಸಿನ್ ಇನ್ನಿತರ ಕಸವನ್ನು ಎಸೆಯಲಾಗಿದೆ. ಇಲ್ಲಿಯೇ ಪೋಟೋಗಳನ್ನು ಬಿಸಾಡಲಾಗಿದೆ.
ಕಳೆದ ಒಂದು ವರ್ಷದಿಂದಲೂ ಇಲ್ಲಿ ಕಸದ ರಾಶಿಯನ್ನು ಹಾಕಲಾಗಿದೆ. ಇದರ ಮಧ್ಯೆಯೇ ದಿಗ್ಗಜ ಅಥ್ಲೀಟ್‌ಗಳ ಭಾವಚಿತ್ರಗಳನ್ನು ಎಸೆದಿರುವುದು ಬೇಸರ ತರಿಸಿದೆ ಎಂದು ಇಲ್ಲಿ ಅಭ್ಯಾಸ ನಡೆಸುವ ಕೆಲ ಕ್ರೀಡಾಪಟುಗಳು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.
ಎಡವಟ್ಟುಗಳ ಆಗರ: ಇತ್ತೀಚಿನ ದಿನಗಳಲ್ಲಿ ಕಂಠೀರವ ಕ್ರೀಡಾಂಗಣ ಒಂದಿಲ್ಲೊಂದು ಸುದ್ದಿಯಿಂದ ಚರ್ಚೆಗೆ ಕಾರಣವಾಗಿದೆ. ಅಥ್ಲೀಟ್ / ಅಧಿಕಾರಿ ಪ್ರಕರಣ, ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅಡ್ಡಿಪಡಿಸಿರುವ ಪ್ರಕರಣ, ಕೋಚ್‌ಗಳ ವರ್ಗಾವಣೆ ಸೇರಿದಂತೆ ಸಾಕಷ್ಟು ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಇದೀಗ ಮಾಜಿ ಅಥ್ಲೀಟ್‌ಗಳ ಪೋಟೋಗಳನ್ನು ಕಸದ ರಾಶಿಗೆ ಎಸೆಯುವ ಮೂಲಕ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
ಇತ್ತೀಚೆಗೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ‘ಕೆಲ ಅಥ್ಲೀಟ್‌ಗಳು ಕ್ರೀಡಾಂಗಣಕ್ಕೆ ಬಾರದಿದ್ದರೆ, ಆಕಾಶ ಕಳಚಿ ಬೀಳುವುದಿಲ್ಲ’ ಎಂದಿದ್ದರು. ಈ ಹೇಳಿಕೆ ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಈ ಫೋಟೋ ಪ್ರಸಂಗ, ಕ್ರೀಡಾಪಟುಗಳಲ್ಲಿ ಮತ್ತಷ್ಟು ಬೇಸರ ಉಂಟು ಮಾಡಿದೆ.
[ಫೋಟೋಗಳು: ಕೆ. ವೀರಮಣಿ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.