ಗೌಡರ ಕುರ್ಚಿ ಉಳಿಸಿದ್ದ ವಾಜಪೇಯಿ

By Web DeskFirst Published Aug 17, 2018, 9:20 AM IST
Highlights

ನಾನು ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಲೋಕಸಭಾ ಅಧಿವೇಶದನಲ್ಲೇ ‘ಇನ್ನೂ ಕಾಲ ಮಿಂಚಿಲ್ಲ’ ಎಂಬ ಸಂದೇಶದೊಂದಿಗೆ ನನಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ಅದನ್ನೇ ಒಂದು ಸಣ್ಣ ಚೀಟಿಯಲ್ಲಿ ಬರೆದು ನನಗೆ ದೂತರ ಮೂಲಕ ಕಳುಹಿಸಿದರು. ಅದೆನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ. ನಾನು ನನ್ನ ಜೀವನದಲ್ಲಿ ಕಂಡ ಕರುಣಾಮಯಿ, ಸಹೃದಯಿ, ಸ್ನೇಹಮಯಿ ವಾಜಪೇಯಿ- ದೇವೇಗೌಡ 

ಬೆಂಗಳೂರು (ಆ. 17): ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಶತ್ರುವನ್ನೂ ಕೂಡ ಕಟುವಾದ ಶಬ್ಧದಿಂದ ಟೀಕಿಸದ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ. ರಾಜ್ಯ ಹಾಗೂ ರಾಷ್ಟ್ರದ ಆಡಳಿತವನ್ನು ಹೇಗೆ ನಡೆಸಬೇಕು ಎಂಬುದನ್ನು ಗೋದ್ರಾ ಘಟನೆಯಲ್ಲಿ ತೋರಿಸಿದರು ಈ ವಾಜಪೇಯಿ.

ರಾಜಕಾರಣದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ದೊಡ್ಡ ಮನುಷ್ಯ. ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನ ಸುದ್ದಿ ಕೇಳಿ ನನಗೆ ಅತೀವ ದುಃಖವಾಯಿತು. ಪ್ರಧಾನಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರೊಬ್ಬ ಶ್ರೇಷ್ಠ ನಾಯಕ, ಅಸಾಧಾರಣ ಸಂಸದೀಯ ಪಟು. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಜೀವನದಲ್ಲಿ ಶತ್ರುವನ್ನೂ ಕೂಡ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ನಾನು ಪ್ರಧಾನಿಯಾಗಿ ರಾಜೀನಾಮೆ ಕೊಡುವ ವೇಳೆ ಫೋನ್ ಮಾಡಿ ಅಧಿಕಾರ ಉಳಿಸಿಕೊಡುತ್ತೇನೆ ಎಂದು ಹೇಳಿದ್ದರು. ತಮ್ಮ ದೂತರನ್ನು ನನ್ನ ಬಳಿಗೆ ಕಳುಹಿಸಿ ಮನವೊಲೈಕೆಗೆ ಅವರು ಯತ್ನಿಸಿದರು. ಆದರೆ ನಾನು ಸೈದ್ಧಾಂತಿಕ ಬದ್ಧತೆ ತೋರಿದರಿಂದ ಅವರ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ.

ಪಾಕಿಸ್ತಾನ ಜತೆ ಸ್ನೇಹ ಬಾಂಧವ್ಯಕ್ಕೆ ಲಾಹೋರ್ ಬಸ್ ಯಾತ್ರೆ ನಡೆಸಿದ್ದು ಚಾರಿತ್ರಿಕ ನಿರ್ಧಾರವಾಯಿತು. ನೆರೆ ರಾಷ್ಟ್ರ ಜತೆ ಶಾಂತಿಯತೆ ಕಾಪಾಡಲು ಪ್ರಯತ್ನ ಮಾಡಿದರು. ಹಾಗೆಯೇ ಅವರಿಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಲು ಸಹ ಹಿಂದೆ ಮುಂದೆ ನೋಡಲಿಲ್ಲ. ರಾಜ್ಯ ಹಾಗೂ ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ಗೋದ್ರಾ ಘಟನೆಯಲ್ಲಿ ವಾಜಪೇಯಿ ತೋರಿಸಿದರು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಕಠಿಣವಾಗಿ ಹೇಳಿದ್ದರು. ತಮ್ಮ ಪಕ್ಷದ ಮುಖ್ಯಮಂತ್ರಿ ಆಗಿದ್ದರೂ ಆ ಕಠಿಣ ಮಾತು ಹೇಳಿದ್ದು ವಾಜಪೇಯಿ ವ್ಯಕ್ತಿತ್ವ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಯಿತು.

ಪ್ರತಿ ವರ್ಷ ಜನವರಿಯಲ್ಲಿ ಅವರ ಮನೆಗೆ ಹೋಗಿ ಬರುವುದು ರೂಢಿಗತವಾಗಿತ್ತು. ರಾಜಕೀಯದಲ್ಲಿ ಯಾವುದೇ ಧರ್ಮ ಹಾಗೂ ಜಾತಿಗೆ ನೋವು ಉಂಟು ಮಾಡಬಾರದು ಎನ್ನುವುದಕ್ಕೆ ಗೋದ್ರಾ ಪ್ರಕರಣದಲ್ಲಿ ಅವರು ನಡೆದುಕೊಂಡ ರೀತಿಯೇ ಸಾಕ್ಷಿ. ಅವರು ಬಹಳ ಸೂಕ್ಷ್ಮ ಸ್ವಭಾವದವರು. ರಾಮ ಮಂದಿರ ಕಟ್ಟಲು ಶಿಲೆಗಳನ್ನು ಬಲಪಂಥೀಯ ನಾಯಕರು ಕಳುಹಿಸಿದ್ದರು. ಹಾಗೆ ಅವುಗಳನ್ನು ವಾಜಪೇಯಿ ಅವರೇ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರ ಒತ್ತಾಯವಾಗಿತ್ತು. ಆದರೆ ಪ್ರಧಾನಿಯಾಗಿದ್ದಾಗ ಅವರು ಶಿಲೆಗಳ ಸ್ವೀಕಾರಕ್ಕೆ ಹೋಗದೆ ತಮ್ಮ ಪ್ರತಿನಿಧಿಯಾಗಿ ಅಧಿಕಾರಿಯನ್ನು ಮಾತ್ರ ಕಳುಹಿಸಿದ್ದರು. 

1975 ರಿಂದ 77 ವರೆಗೆ ತುರ್ತು ಪರಿಸ್ಥಿತಿಯಲ್ಲಿ ನಾವೆಲ್ಲ ಜೊತೆಯಲ್ಲೇ ಜೈಲು ಸೇರಿದ್ದೆವು. ಆಗಿನ ಕೇಂದ್ರ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡಿದ್ದೆವು. 1977 ರಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲ ಯಶಸ್ವಿಯಾದೆವು. ಮುರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿ ಆದ ನಂತರ ಅವರ ಸಂಪುಟದಲ್ಲಿ ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿ ರಾಷ್ಟ್ರಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿದ್ದರು. ಆಗಲೇ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಬರಲು ಬಹಳ ಒತ್ತಾಯಿಸಿದ್ದರು.

ನಾವೆಲ್ಲ ಮುರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಒಟ್ಟಿಗೆ ಕೆಲಸ ಮಾಡೋಣ ಬಾ ಎಂದು ನನಗೆ ಹೇಳಿದ್ದರು. ಆದರೆ ಕರ್ನಾಟಕದಲ್ಲಿ ಜನತಾ ಸರ್ಕಾರವನ್ನು ತರಲೇಬೇಕು ಎಂದು ಮನವರಿಕೆ ಮಾಡಿಕೊಟ್ಟ ನಂತರ ಅವರು ಒಪ್ಪಿದರು. 1977 ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು, ವಾಜಪೇಯಿ ಹಾಗೂ ಆಡ್ವಾಣಿ ಅವರು, ವೀರೇಂದ್ರ ಪಾಟೀಲ್ ಅವರ ಗೆಲುವಿಗೆ ಹಗಲಿರುಳು ಕೆಲಸ ಮಾಡಿದ್ದೆವು. 1979 ರಲ್ಲಿ ಜನತಾ ಪಕ್ಷದ ಸರ್ಕಾರ ಪತನವಾದ ನಂತರ ೮೦ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದರು.

ಆಗಿನಿಂದ ನನ್ನ ಮತ್ತು ಅವರ ರಾಜಕೀಯ ದಾರಿ ಬದಲಾಯಿತು. ಆದರೆ ಸ್ನೇಹ ಸಂಬಂಧವು ಬಹಳ ಗಟ್ಟಿಯಾಗಿತ್ತು. ನಾನು ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಲೋಕಸಭಾ ಅಧಿವೇಶದನಲ್ಲೇ ‘ಇನ್ನೂ ಕಾಲ ಮಿಂಚಿಲ್ಲ’ ಎಂಬ ಸಂದೇಶದೊಂದಿಗೆ ನನಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ಅದನ್ನೇ ಒಂದು ಸಣ್ಣ ಚೀಟಿಯಲ್ಲಿ ಬರೆದು ನನಗೆ ದೂತರ ಮೂಲಕ ಕಳುಹಿಸಿದರು. ಅದೆನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ. ನಾನು ನನ್ನ ಜೀವನದಲ್ಲಿ ಕಂಡ
ಕರುಣಾಮಯಿ, ಸಹೃದಯಿ, ಸ್ನೇಹಮಯಿ ವಾಜಪೇಯಿ. ಅವರು ನಡೆದು ಬಂದ ದಾರಿ ನಮಗೆಲ್ಲಾ ದಾರಿ ದೀಪವಾಗಲಿ. ಅವರ ಅಗಲಿಕೆ ರಾಷ್ಟ್ರಕ್ಕೆ ಆಗಿರುವ ದೊಡ್ಡ ನಷ್ಟ.

- ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ 

click me!