
ಬೆಂಗಳೂರು(ಸೆ. 08): ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ.. ಅಹೋರಾತ್ರಿ ಧರಣಿ ನಡೆಸಿದ್ದು, ಬಳ್ಳಾರಿ ಮೂಲದ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ನಾಗವೇಣಿ ಅಸ್ವಸ್ಥಗೊಂಡ ಆಶಾ ಕಾರ್ಯಕರ್ತೆ. ನಾಗವೇಣಿ ತೀವ್ರ ಚಳಿಜ್ವರದಿಂದಾಗಿ ತಲೆ ಸುತ್ತು ಬಂದು ಕುಸಿದು ಬಿದ್ದರು. ಕೆಲಕಾಲ ಅವರನ್ನು ಸಂತೈಸಿ ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯ್ತು.. ನಿನ್ನೆಯಿಂದ ಇಲ್ಲಿವರೆಗೆ ಇಬ್ಬರು ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಳೆ, ಚಳಿಯಲ್ಲೇ ರಾತ್ರಿ ಕಳೆದ ಕಾರ್ಯಕರ್ತೆಯರು!
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫ್ರೀಡಂ ಪಾರ್ಕ್'ನಲ್ಲಿ ಅಹೋರಾತ್ರಿ ಮುಷ್ಕರ ನಡೆಸುತ್ತಿರುವ ‘ಆಶಾ’ ಕಾರ್ಯಕರ್ತೆಯರು ಗುರುವಾರ ರಾತ್ರಿ ಸುರಿಯುವ ಮಳೆ, ಚಳಿ, ಗಾಳಿಯ ನಡುವೆಯೇ ಪ್ರತಿಭಟನಾ ಸ್ಥಳದಲ್ಲೇ ಮಲಗಿ ರಾತ್ರಿ ದೂಡಿದರು. ಮಕ್ಕಳನ್ನು ಕರೆತಂದಿದ್ದ ಮಹಿಳೆಯರು ಮಕ್ಕಳನ್ನೂ ಜತೆಯಲ್ಲೇ ಮಲಗಿಸಿಕೊಂಡು ತಾವು ಜಾಗರಣೆ ಮಾಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ನಗರಕ್ಕೆ ಆಗಮಿಸಿದ ಕಾರ್ಯಕರ್ತೆಯರ ಪೈಕಿ ಕೆಲ ಒಬ್ಬಂಟಿ ತಾಯಂದಿರು ಹಾಗೂ ತಮ್ಮನ್ನು ಬಿಟ್ಟಿರಲಾರದ ಮಕ್ಕಳನ್ನು ತಾಯಂದಿರು ಪ್ರತಿಭಟನೆಗೆ ಜತೆಯಲ್ಲೇ ಕರೆತಂದು ಬೆಳಗ್ಗೆ ಯಿಂದಲೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಂಜೆ ಮಳೆ ಆರಂಭವಾದರೂ ಅತ್ತಿತ್ತ ಕದಲದ ಆಶಾ ಕಾರ್ಯಕರ್ತೆಯರು ತಮ್ಮ ಹಸುಗೂಸುಗಳು, ಸಣ್ಣಪುಟ್ಟ ಮಕ್ಕಳೊಂದಿಗೆ ಮಳೆಯಿಂದ ರಕ್ಷಣೆಗೆ ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ಪೆಂಡಾಲ್, ಅಕ್ಕಪಕ್ಕದ ರಸ್ತೆಗಳಲ್ಲಿನ ಮರಗಳಡಿ ಹಾಗೂ ಅಂಗಡಿ-ಮುಂಗಟ್ಟು, ಎಟಿಎಂ ಕೇಂದ್ರಗಳಡಿ ಆಶ್ರಯ ಪಡೆದರು. ಮಳೆ ಬಿಟ್ಟ ಬಳಿಕ ಕೂಡಲೇ ತಾವು ರಕ್ಷಣೆಗೆ ಹುಡುಕಿಕೊಂಡಿದ್ದ ಜಾಗಗಳಲ್ಲೇ ಮಲಗಿದರು. ಕೆಲವರು ತಮ್ಮ ಮಕ್ಕಳನ್ನು ಮಲಗಿಸಿ ರಾತ್ರಿ ಇಡೀ ತಾವು ಎಚ್ಚರವಾಗಿಯೇ ಇದ್ದರೆ, ಇನ್ನು ಕೆಲವರು ಕೂತಲ್ಲೇ ತೂಕಡಿಸಿ ನಿದ್ದೆಯ ಮಂಪರು ಕಳೆದುಕೊಳ್ಳುತ್ತಿದ್ದರು. ಬಹಳಷ್ಟು ಜನ ತಮ್ಮ ಬ್ಯಾಗುಗಳನ್ನೇ ತಲೆದಿಂಬಾಗಿಸಿಕೊಂಡು ಮೊದಲೇ ತಂದಿದ್ದ ಹೊದಿಕೆ ಹೊದ್ದು ಮಲಗಿದರು. ಯಾವುದೇ ಹೊದಿಕೆ ತರದವರು ರಾತ್ರಿ ಇಡೀ ಚಳಿಯಲ್ಲಿ ನಡುಗುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮಕ್ಕಳನ್ನು ಕರೆತಂದಿದ್ದ ಕೆಲ ಮಹಿಳೆ ಯರು, ಏನು ಮಾಡೋದು ನಾವು ಒಬ್ಬಂಟಿ, ನಮ್ಮ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಕರೆತರಬೇಕಾಯಿತು ಎಂದು ಹೇಳಿದರು. ಇನ್ನು ಕೆಲವರು ನಮ್ಮ ಮಕ್ಕಳು ನಮ್ಮನ್ನು ಬಿಟ್ಟು ಇರುವುದಿಲ್ಲ. ಹಾಗಾಗಿ ಕರೆತರಬೇಕಾಯಿತು ಎಂದು ಅಳಲು ತೋಡಿಕೊಂಡರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.