
ಬೆಂಗಳೂರು (ಆ.28): ಬಡವ-ಶ್ರೀಮಂತ, ವರ್ಗ-ಸಮುದಾಯಗಳ ಭೇದವಿಲ್ಲದೇ ರಾಜ್ಯದ ಸಮಸ್ತ ನಾಗರಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವ ಯುನಿವರ್ಸಲ್ ಹೆಲ್ತ್ ಕವರೇಜ್ ಯೋಜನೆ ‘‘ಆರೋಗ್ಯ ಭಾಗ್ಯ’’ ನವೆಂಬರ್ 1 ರಿಂದ ರಾಜ್ಯದಲ್ಲೇ ಜಾರಿಗೆ ಬರಲಿದ್ದು, ಈ ಮಾದರಿಯ ಯೋಜನೆಯನ್ನು ಜಾರಿಗೊಳಿಸುವ ಪ್ರಥಮ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.
ಈ ಯೋಜನೆಯಡಿ ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲಿರುವ 1.40 ಕೋಟಿ ಕುಟುಂಬಗಳ ಪೈಕಿ 1.05 ಕೋಟಿ ಕುಟುಂಬಗಳನ್ನು ಆದ್ಯತಾ ವಲಯದಲ್ಲಿ ಗುರುತಿಸಲಾಗಿದ್ದು, ಈ ಕುಟುಂಬಗಳು ಆಧಾರ್ ಜತೆ ಲಿಂಕ್ ಹೊಂದಿರುವ ಯುನಿವರ್ಸಲ್ ಹೆಲ್ತ್ ಕಾರ್ಡ್ ಪಡೆದು ಯಾವುದೇ ಪ್ರೀಮಿಯಂ ಇಲ್ಲದೇ ಆರೋಗ್ಯ ಸೇವೆ ಪಡೆಯಲಿವೆ. ಇನ್ನುಳಿದ 30 ಲಕ್ಷ ಕುಟುಂಬಗಳು ಆನ್‌ಲೈನ್ ಮೂಲಕ ಆಧಾರ್ ಮಾಹಿತಿ ಜತೆ ನೋಂದಣಿ ಮಾಡಿಕೊಂಡು ಗ್ರಾಮೀಣ ಪ್ರದೇಶದವರು 300 ರೂ ಹಾಗೂ ನಗರ ಪ್ರದೇಶದವರು 700 ರೂ ಪ್ರೀಮಿಯಂ ಸೇರಿಸಿದರೆ ಯೋಜನೆಯ ವ್ಯಾಪ್ತಿಗೆ ಒಳಪಡುವರು. ಅಲ್ಲದೇ ರಾಜ್ಯದ ವಿವಿ ಸಹಕಾರ ಸಂಘಗಳು ಹಾಗೂ ಸೊಸೈಟಿಗಳ 2.38 ಕೋಟಿ ಸದಸ್ಯರು ಯಶಸ್ವಿನಿ ಯೋಜನೆಯಡಿ ಇನ್ನು ಮುಂದೆ ಠೇವಣಿ ವಂತಿಕೆ ಇರಿಸದೇ ಸೇವೆ ಪಡೆಯುವರು. ಪ್ರಾಥಮಿಕ, ತುರ್ತು, ದ್ವಿತಿಯ ಹಾಗೂ ತೃತಿಯ ಹಂತದ ಚಿಕಿತ್ಸೆಗಳನ್ನು ಯೋಜನೆಯಡಿ ನೀಡಲಾಗುತ್ತದೆ. ಪ್ರಥಮ, ತುರ್ತು ಹಾಗೂ ದ್ವಿತಿಯ ಹಂತದ ಚಿಕಿತ್ಸೆಗಳನ್ನು ರಾಜ್ಯ ಸರ್ಕಾರದ ಒಟ್ಟು 50 ಸಾವಿರ ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡಲಾಗುತ್ತದೆ ಹಾಗೂ 500 ತೃತಿಯ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳ ಮುಖಾಂತರ ಯೋಜನೆಯಡಿ ಒದಗಿಸಲಾಗುವುದು. ತುರ್ತು ಸೇವೆಗಳಾದ ಅಪಘಾತ ಮತ್ತು ಶಸ್ತ್ರ ಚಿಕಿತ್ಸೆ ಸಂಬಂಧಿ ಸೇವೆಗಳನ್ನು ತುರ್ತಾಗಿ ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ ಮೊದಲು-ಪಾವತಿ ನಂತರ’ ನೀತಿಯಡಿ ಒದಗಿಸಲಾಗುವುದು. ಸರಾಸರಿ 25 ಸಾವಿರ ರು.ವರೆಗಿನ ವೆಚ್ಚವನ್ನು ತುರ್ತು ಸೇವೆಯಡಿ ನೀಡಲಾಗುವುದು. ತುರ್ತು ಚಿಕಿತ್ಸೆ ಬಳಿಕ 48 ಗಂಟೆಗಳ ನಂತರ ಅಗತ್ಯವಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಅವಕಾಶವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆ ಶುಲ್ಕ ಮತ್ತು ವಿವಿ‘ ಸೇವೆಗಳ ದರಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ನಿಗದಿಯಾಗಲಿವೆ. ಈ ಸಂಬಂ‘ ತಿದ್ದುಪಡಿ ಕಾಯ್ದೆಗೆ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಕಾಯ್ದೆ ತಿದ್ದುಪಡಿ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಯೋಜನೆಯಡಿ 108 ಮತ್ತು 104 ಸಹಾಯವಾಣಿಗಳ ಮೂಲಕ ಉಚಿತ ಸಲಹೆ, ಉಚಿತ ಔಷಧ ಉಚಿತ ಡಯಾಲಿಸಿಸ್, ಉಚಿತ ರಕ್ತ ಮತ್ತು ರಕ್ತಕಣಗಳು ಹಾಗೂ ಆರೋಗ್ಯ ಸಂಬಂಧಿ ಯಾವುದೇ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಲು ನೆರವು ಪಡೆಯಬಹುದು. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಟೋಲ್ ಫ್ರೀ ಸಂಖ್ಯೆ 1800-425-8330, 1800-425-2646 ಗೆ ಕರೆ ಮಾಡಬಹುದು.
8 ಯೋಜನೆಗಳು ವಿಲೀನ
ಈಗಾಗಲೇ ರಾಜ್ಯ ಸರ್ಕಾರ ವಿವಿ ಆರೋಗ್ಯ ರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಿದೆ. ವಾಜಪೇಯಿ ಆರೋಗ್ಯಶ್ರೀ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ಯಶಸ್ವಿನಿ ಯೋಜನೆ, ಜ್ಯೋತಿ ಸಂಜೀವಿನಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಬಿಮಾ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ, ಪೊಲೀಸ್ ಆರೋಗ್ಯ ಭಾಗ್ಯ ಯೋಜನೆಗಳು ಪ್ರತ್ಯೇಕವಾಗಿ ನಿಗದಿತ ವಲಯದ ಜನರಿಗೆ ಆರೋಗ್ಯ ರಕ್ಷಣೆ ಒದಗಿಸುತ್ತಿವೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಸರಿಸುಮಾರು 869.49 ಕೋಟಿ ರು.ಗಳ ವೆಚ್ಚ ಮಾಡುತ್ತಿದೆ. ಯುನಿವರ್ಸಲ್ ಹೆಲ್ತ್ ಕವರೇಜ್ ಅಡಿಯಲ್ಲಿ ಆರೋಗ್ಯ ಭಾಗ್ಯ ಯೋಜನೆಯಡಿ ಈ ಎಲ್ಲ ಯೋಜನೆಗಳನ್ನು ವಿಲೀನಗೊಳಿಸಲಾಗುವುದು. ಆದರೆ ನವೆಂಬರ್ 1 ರವರೆಗೆ ಈ ಯೋಜನೆಗಳು ಅಸ್ತಿತ್ವದಲ್ಲಿ ಇರಲಿವೆ.
ಯಾವ ಹಂತದಲ್ಲಿ ಯಾವ ಚಿಕಿತ್ಸೆ
ಪ್ರಾಥಮಿಕ ಹಂತದಲ್ಲಿ ಮೂಲಭೂತ ಚಿಕಿತ್ಸೆಗಳು, ಎರಡನೇ ಹಂತದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸಕರಿಂದ ಶಿಫಾರಸು ಮಾಡಲ್ಪಟ್ಟ ರೋಗಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡುವುದು, ಮೂರನೇ ಹಂತದಲ್ಲಿ ತಜ್ಞ ವೈದ್ಯರಿಂದ ಶಿಫಾರಸು ಮಾಡಲ್ಪಟ್ಟ ರೋಗಿಯನ್ನು ಮತ್ತಷ್ಟು ಸುಧಾರಿತ ಯಂತ್ರೋಪಕರಣಗಳ ಮೂಲಕ ತಪಾಸಣೆ ಮತ್ತು ಚಿಕಿತ್ಸೆ ನೀಡುವುದು ಮತ್ತು ತುರ್ತು ಚಿಕಿತ್ಸೆಯಡಿ ಅಪಘಾತ, ಶಸ್ತ್ರ ಚಿಕಿತ್ಸೆ ಸಂಬಂಧಿ ಚಿಕಿತ್ಸೆ ನೀಡಲಾಗುವುದು.
ಯಾರಿಗೆ ಅನ್ವಯ?
* ರೈತರು, ಅನುದಾನಿತ ಸಂಸ್ಥೆಗಳ ಶಿಕ್ಷಕರು, ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತರು
* ಇತರೆ ಆರ್ಥಿಕವಾಗಿ ಹಿಂದುಳಿದವರು
* ಅಸಂಘಟಿತ ವಲಯದ ಕಾರ್ಮಿಕರಾದ ಆಟೊ ಚಾಲಕರು, ಕೂಲಿಕಾರರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ನಿರ್ಮಾನ ಕಾರ್ಮಿಕರು, ನೇಕಾರರು, ಆರೋಗ್ಯ ಕಾರ್ಯಕರ್ತರು ಮತ್ತು ಮನರೇಗಾ ಕೂಲಿಕಾರರು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ ಪಂಗಡದವರು
* ಪೌರ ಕಾರ್ಮಿಕರು
* ಪ್ರಾಣಿಗಳಿಂದ ದಾಳಿಗೆ ಒಳಗಾದವರು
* ಮಾಧ್ಯಮದವರು
* ಸಹಕಾರಿ ಸಂಸ್ಥೆಗಳ ಸದಸ್ಯರು
* ಸರ್ಕಾರಿ ನೌಕರರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.