ರಾಜ್ಯ ಸರ್ಕಾರದಿಂದ ಉಚಿತ ಎಲ್ ಪಿಜಿ ಸಂಪರ್ಕ

First Published Jul 25, 2018, 10:55 AM IST
Highlights

ಕರ್ನಾಟಕದಲ್ಲಿ  ಉಚಿತವಾಗಿ ಎಲ್ ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಆಗಸ್ಟ್ 15 ರಿಂದ ಆರಂಭ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಗೆ ಮರುಚಾಲನೆ ಸಿಗಲಿದ್ದು, ಆ. 15 ರಿಂದ ಎರಡು ತಿಂಗಳಲ್ಲಿ ಒಂದು ಲಕ್ಷ ಕುಟುಂಬಕ್ಕೆ ಉಚಿತ ಅಡುಗೆ ಅನಿಲ ಕಿಟ್ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಆಹಾರ ಸಚಿವ ಜಮೀರ್ ಅಹ್ಮದ್ ಮತ್ತು ಇಲಾಖಾ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಸಿಲಿಂಡರ್, ಒಲೆ, ರೆಗ್ಯುಲೇಟರ್‌ಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಫೆಬ್ರವರಿ ತಿಂಗಳಲ್ಲಿಯೇ ಅನಿಲಭಾಗ್ಯ ಕಿಟ್‌ಗಳನ್ನು ವಿತರಣೆ ಮಾಡಬೇಕಿತ್ತು. ಚುನಾವಣಾ ನೀತಿ ಸಂಹಿತೆಯ ಕಾರಣ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ವಿತರಣೆ ಮಾಡುವ ಕಾರ್ಯಕ್ರಮವನ್ನು ಆರಂಭಿಸಲಾಗುವುದು. 

ಆ. 15 ರಿಂದ ವಿತರಣೆ ಕಾರ್ಯ ಪ್ರಾರಂಭಿಸಿ ಈಗಾಗಲೇ ಗುರುತಿಸಿರುವ ಫಲಾನುಭವಿಗಳಿಗೆ ಎರಡು ತಿಂಗಳಲ್ಲಿ ಅಡುಗೆ ಅನಿಲ್ ಕಿಟ್ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನಿಲ ಭಾಗ್ಯ ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, 32 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 10 ಲಕ್ಷದಂತೆ ಮೂರು ಹಂತದಲ್ಲಿ ಅನಿಲ ಭಾಗ್ಯ ಯೋಜನೆ ಕಿಟ್ ಗಳನ್ನು ವಿತರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಯೋಜನೆಯ ಕಿಟ್ ವಿತರಣೆಗೆ ಕೇಂದ್ರವು ಒಪ್ಪಿಗೆ ನೀಡಿದ್ದು, ಈ ಸಂಬಂಧ ಒಂದು ಲಕ್ಷ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಹೇಳಿದರು.

click me!