ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌: ಅಂಬಾನಿ

By Web DeskFirst Published May 22, 2019, 8:52 AM IST
Highlights

ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಲೇಖನ| ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌ಗೆ ಅಂಬಾನಿ ನಿರ್ಧಾರ| 

ಅಹಮದಾಬಾದ್‌[ಮೇ.22]: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಲೇಖನ ಪ್ರಕಟಿಸಿದ್ದಕ್ಕೆ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ದಾಖಲಿಸಲಾಗಿದ್ದ 5000 ಕೋಟಿ ರು. ಮಾನನಷ್ಟಮೊಕದ್ದಮೆ ವಾಪಸ್‌ ಪಡೆಯಲು ರಿಲಯನ್ಸ್‌ ಗ್ರೂಪ್‌ನ ಮುಖ್ಯಸ್ಥ ಅನಿಲ್‌ ಅಂಬಾನಿ ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ಅನಿಲ್‌ ಅಂಬಾನಿ ಪರ ವಕೀಲ ರಸೇಶ್‌ ಪಾರೀಖ್‌ ಅವರು, ‘ಕಾಂಗ್ರೆಸ್‌ ನಾಯಕರು ಹಾಗೂ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ವಿರುದ್ಧ ದಾಖಲಿಸಿರುವ ಮಾನನಷ್ಟಮೊಕದ್ದಮೆ ಪ್ರಕರಣವನ್ನು ವಾಪಸ್‌ ಪಡೆಯುತ್ತಿದ್ದೇವೆ ಎಂಬುದನ್ನು ಅವರಿಗೆ ತಿಳಿಸಿದ್ದೇವೆ,’ ಎಂದು ಹೇಳಿದ್ದಾರೆ. ಕೋರ್ಟ್‌ನ ಬೇಸಿಗೆ ರಜಾ ಅವಧಿ ಮುಕ್ತಾಯವಾದ ಬಳಿಕ ನಡೆಯುವ ವಿಚಾರಣೆ ವೇಳೆ ಈ ಮಾನನಷ್ಟಮೊಕದ್ದಮೆಯನ್ನು ಹಿಂಪಡೆಯುವ ಪ್ರಕ್ರಿಯೆಗಳು ನಡೆಯಲಿವೆ ಎಂದು ಕಾಂಗ್ರೆಸ್‌ ನಾಯಕರ ಪರ ವಕೀಲ ಪಿ.ಎಸ್‌. ಚಂಪನೇರಿ ಹೇಳಿದ್ದಾರೆ.

ಈ ಹಿಂದೆ ವಿವಾದಾತ್ಮಕ ವರದಿ ಪ್ರಸಾರ ಮಾಡಿದ್ದಕ್ಕೆ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಸೇರಿ ಇತರ ಪತ್ರಿಕೆಗಳು, ಕೆಲವು ಪತ್ರಕರ್ತರು ಮತ್ತು ಕಾಂಗ್ರೆಸ್‌ ನಾಯಕರಾದ ರಣದೀಪ್‌ ಸುರ್ಜೇವಾಲಾ, ಸುನಿಲ್‌ ಜಖಾರ್‌, ಊಮ್ಮನ್‌ ಚಾಂಡಿ, ಅಶೋಕ್‌ ಚವಾಣ್‌, ಅಭಿಷೇಕ್‌ ಮನು ಸಿಂಘ್ವಿ, ಸಂಜಯ್‌ ನಿರುಪಮ್‌ ಹಾಗೂ ಶಕ್ತಿಸಿಂಹ ಗೋಯಿಲ್‌ ವಿರುದ್ಧ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌, ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ರಿಲಯನ್ಸ್‌ ಏರೋಸ್ಟ್ರಕ್ಚರ್‌ ಮಾನನಷ್ಟಮೊಕದ್ದಮೆ ದಾಖಲಿಸಿತ್ತು.

click me!