500 ರೈಲು ಬಂದರೂ ಜನ ಕದಲಲ್ಲ- ಆಯೋಜಕನ ಮಾತಿನ ಬೆನ್ನಲ್ಲೇ ದುರಂತ!

By Web DeskFirst Published Oct 21, 2018, 8:55 AM IST
Highlights

ಅಮೃತಸರ ರೈಲ್ವೆ ದುರಂತಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಅನ್ನೋದು ಇದೀಗ ಬಹಿರಂಗವಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಸಿಧು ಮೇಲೂ ಆರೋಪ ಕೇಳಿಬಂದಿದೆ. ಇಲ್ಲಿದೆ ಮಾಹಿತಿ.

ಅಮೃತಸರ(ಅ.21): ರೈಲ್ವೆ ದುರಂತಕ್ಕೆ ಕಾರಣವಾದ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಸಿಧುಗೆ ಕಾರ್ಯಕ್ರಮ ಆಯೋಜಕ, ‘ಇಲ್ಲಿ ನೋಡಿ ಮೇಡಂ, ನಿಮ್ಮನ್ನು ನೋಡಲು 5000ಕ್ಕೂ ಹೆಚ್ಚು ಜನರು ಅತ್ಯುತ್ಸಾಹದಿಂದ ರೈಲ್ವೆ ಹಳಿಗಳ ಮೇಲೆಲ್ಲಾ ನಿಂತಿದ್ದಾರೆ. ಒಂದು ವೇಳೆ 500 ರೈಲುಗಳು ಬಂದರೂ ಅವರು ಜಾಗಬಿಟ್ಟು ಕದಲುವುದಿಲ್ಲ’ ಎಂದು ಹೇಳಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಪರ್ಯಾಸವೆಂದರೆ ಕಾರ್ಯಕ್ರಮದ ಆಯೋಜಕ ಹೀಗೆ ಹೇಳಿದ ಕೆಲವೇ ಹೊತ್ತಿನಲ್ಲಿ ರೈಲ್ವೆ ದುರಂತ ಸಂಭವಿಸಿತ್ತು. ಅಪಾಯದ ಕುರಿತು ಕಾರ್ಯಕ್ರಮ ಆಯೋಜಕರಿಗೆ ಹಾಗೂ ಸಿಧು ಪತ್ನಿಗೆ ಅರಿವಿದ್ದರೂ, ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದು ಈ ವಿಡಿಯೋದಿಂದ ಕಂಡುಬರುತ್ತದೆ.

ರೈಲ್ವೆ ಚಾಲಕನ ವಿರುದ್ಧ ಕ್ರಮ ಇಲ್ಲ: ಸಚಿವ
ಅಮೃತಸರದಲ್ಲಿ ದಸರಾ ಕಾರ್ಯಕ್ರಮದ ವೇಳೆ ಸಂಭವಿಸಿದ ರೈಲ್ವೆ ದುರಂತದಲ್ಲಿ ರೈಲ್ವೆಯಿಂದ ಯಾವುದೇ ನಿರ್ಲಕ್ಷ್ಯ ಉಂಟಾಗಿಲ್ಲ. ಹೀಗಾಗಿ ರೈಲು ಚಾಲಕನನ್ನು ದಂಡನೆಗೆ ಗುರಿಪಡಿಸಬೇಕಾಗಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಶನಿವಾರ ಹೇಳಿದ್ದಾರೆ. ರೈಲ್ವೆ ಹಳಿಗಳ ಸಮೀಪ ಕಾರ್ಯಕ್ರಮ ಆಯೋಜಿಸದಂತೆ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಸರಾ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇದ್ದಿದ್ದರಿಂದ ರೈಲ್ವೆ ಇಲಾಖೆಯ ಯಾವುದೇ ತಪ್ಪಿಲ್ಲ. ನಮ್ಮ ಕಡೆಯಿಂದ ಯಾವುದೇ ಪ್ರಮಾದ ಆಗಿರದೇ ಇರುವ ಕಾರಣ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯವಿಲ್ಲ. ಭವಿಷ್ಯದಲ್ಲಿ ಜನರು ರೈಲ್ವೆ ಹಳಿಗಳ ಮೇಲೆ ಕಾರ್ಯಕ್ರಮ ಆಯೋಜಿಸುವುದನ್ನು ಮಾಡಬಾರದು ಎಂದಿದ್ದಾರೆ.

click me!