ಬಿಜೆಪಿಯ ರಣತಂತ್ರವನ್ನೇ ಬದಲಿಸಿದ ಅಮಿತ್ ಶಾ

By Suvarna Web DeskFirst Published Apr 9, 2018, 7:59 AM IST
Highlights

ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಗಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ವಿಧಾನಸಭೆಯ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಏಕಾಏಕಿ ತಮ್ಮ ರಣತಂತ್ರವನ್ನೇ ಬದಲಾಯಿಸಿದ್ದಾರೆ.

ಬೆಂಗಳೂರು :  ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಗಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ವಿಧಾನಸಭೆಯ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಏಕಾಏಕಿ ತಮ್ಮ ರಣತಂತ್ರವನ್ನೇ ಬದಲಾಯಿಸಿದ್ದಾರೆ.

ಈ ಮೊದಲು ಅಮಿತ್ ಶಾ ಅವರು ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಉತ್ತರ ಪ್ರದೇಶ ಮಾದರಿಯಂತೆ ಸಾಕಷ್ಟು ಹೊಸ ಪ್ರಯೋಗ ನಡೆಸಲು ನಿರ್ಧರಿಸಿದ್ದರು. ಆದರೆ, ಕಳೆದ ಒಂದು ತಿಂಗಳಲ್ಲಿ ವ್ಯಾಪಕ ರಾಜ್ಯ ಪ್ರವಾಸ ಕೈಗೊಂಡ ನಂತರ ಹಾಗೂ ತಮ್ಮ ಬಹುತಂಡ ಸಮೀಕ್ಷೆಯನ್ನು ಆಧರಿಸಿ ರಾಜ್ಯ ಚುನಾವಣಾ ಕಣವನ್ನು ಮತ್ತು ಪಕ್ಷದ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಆ ಎಲ್ಲ ಪ್ರಯೋಗಗಳನ್ನು ಕಡಿಮೆ ಮಾಡಿ ಹಿಂದಿನಂತೆ ಗೆಲ್ಲುವ ಕುದುರೆಗಳ ಮಾನದಂಡವನ್ನೇ ಪ್ರಮುಖವಾಗಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಬಿಜೆಪಿ ಪಾಳೆಯದಿಂದ ಹೊರಬಿದ್ದಿದೆ. ಕೆಲವೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಯೋಗ ನಡೆಸಬಹುದೇ ಹೊರತು ಸಾರಾಸಗಟಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಹೊಸಬರನ್ನು ಕಣಕ್ಕಿಳಿಸುವ ‘ರಿಸ್ಕ್’ ತೆಗೆದುಕೊಳ್ಳುವುದಕ್ಕೆ ಇದು ಸಕಾಲವಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.

ಹೀಗಾಗಿ ಪಕ್ಷದ ವತಿಯಿಂದ ನಡೆಸಿದ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡರೂ ಸ್ಥಳೀಯ ಲೆಕ್ಕಾಚಾರದ ಪ್ರಕಾರ, ಸ್ಥಳೀಯ ನಾಯಕರಿಗೆ ಹೊಂದಿಕೆಯಾಗುವ, ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗೇ ಟಿಕೆಟ್ ನೀಡುವ ಬಗ್ಗೆ ಅಮಿತ್ ಶಾ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಪರಿಣಾಮ ಈ ಬಾರಿ ತಮಗೆ ಟಿಕೆಟ್ ಸಿಗುವುದೋ ಅಥವಾ ಇಲ್ಲವೋ ಎಂಬ ಆತಂಕದಲ್ಲಿದ್ದ ಅನೇಕ ಮಾಜಿ ಶಾಸಕರು, ಮುಖಂಡರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಈ ಹಿನ್ನೆಲೆಯಲ್ಲೇ ಈಶ್ವರಪ್ಪ, ಶ್ರೀರಾಮುಲು, ರೇಣುಕಾಚಾರ್ಯ, ಸೋಮಣ್ಣ ಅವರಿಗೆಲ್ಲಾ ಟಿಕೆಟ್ ಭರವಸೆ ಸಿಕ್ಕಿದೆ. ಜತೆಗೆ ಚುನಾವಣೆ ಎದುರಿಸುವ ‘ಸಂಪನ್ಮೂಲ’ದೊಂದಿಗೆ ತೆರೆಮರೆಯಲ್ಲಿ ಲಾಬಿ ನಡೆಸಿದ್ದ ಅನೇಕ ಮುಖಂಡರಲ್ಲೂ ನಿರೀಕ್ಷೆ ಮೂಡಿದೆ.

ಕಳೆದ ಆಗಸ್ಟ್ ತಿಂಗಳವರೆಗೆ ಅಮಿತ್ ಶಾ ಅವರಿಗೆ ಕರ್ನಾಟಕ ರಾಜಕಾರಣದ ಬಗ್ಗೆ ಇದ್ದ ಯೋಜನೆಯೇ ಬೇರೆ. ಹೀಗಾಗಿಯೇ ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ಎಂಬ ಘೋಷಣೆ ಪದೇ ಪದೇ ಕೇಳಿಬರುತ್ತಿತ್ತು. ಆದರೆ, ಕಳೆದ ಆಗಸ್ಟ್ ತಿಂಗಳಲ್ಲಿ ಶಾ ಅವರು ಮೂರು ದಿನಗಳ ಕಾಲ ಆಗಮಿಸಿ ಪಕ್ಷದ ವಿವಿಧ ಹಂತದ ಮುಖಂಡರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ನಂತರವೇ ಅವರಿಗೆ ರಾಜ್ಯ ರಾಜಕಾರಣದ ಹಾಗೂ ರಾಜ್ಯ ಬಿಜೆಪಿ ಘಟಕದ ಜಟಿಲತೆಯ ಬಗ್ಗೆ ಸ್ಪಷ್ಟ ಚಿತ್ರಣ ಕಂಡು ಬಂತು.

ಹಲವಾರು ರಾಜ್ಯಗಳಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ ಜಯಭೇರಿ ಬಾರಿಸಿದ ಅಮಿತ್ ಶಾ ಅವರಿಗೆ ರಾಜ್ಯ ಘಟಕದಲ್ಲಿನ ಲೋಪದೋಷಗಳನ್ನು ಹೇಗೆ ಸರಿಪಡಿಸಿ ಸಂಘಟನೆ ಬಲಪಡಿಸಬಹುದು ಎಂಬುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರು ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಂದಿಷ್ಟು ಕಾರ್ಯಯೋಜನೆಗಳನ್ನು ನೀಡಿ ವಾಪಸಾದರು. ಮತ್ತೊಮ್ಮೆ ವಾಪಸ್ ಬರುವ ವೇಳೆ ಈ ಎಲ್ಲ ಕಾರ್ಯಯೋಜನೆಗಳನ್ನು ನೂರಕ್ಕೆ ನೂರರಷ್ಟು ಪೂರೈಸಿರಬೇಕೆಂಬ ನಿರ್ದೇಶನವನ್ನೂ ನೀಡಿದ್ದರು.

ಆದರೆ, ಗುಜರಾತ್ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿ ಕರ್ನಾಟಕಕ್ಕೆ ಬಂದಾಗ, ಆ ಕಾರ್ಯಯೋಜನೆಗಳ ಫಲಿತಾಂಶ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಕಂಡುಬಂತು. ಅಲ್ಲದೇ, ಎದುರಾಳಿ ಸಿದ್ದರಾಮಯ್ಯ ಕೂಡ ಅನೇಕಚತುರ ರಾಜಕೀಯ ದಾಳಗಳನ್ನು ಉರುಳಿಸಿದ್ದರು.

ಈ ಹಂತದಲ್ಲಿ ಹೊಸ ಯೋಜನೆ ರೂಪಿಸಿದ ಅಮಿತ್ ಶಾ ಕರ್ನಾಟಕದಲ್ಲಿ ಮೋದಿ ಪ್ರವಾಸ ಆರಂಭವಾದ ನಂತರ ಬಿಜೆಪಿಯ ಪರವಾಗಿ ಭಾರೀ ಅಲೆ ಸೃಷ್ಟಿಯಾಗುವ ನಿರೀಕ್ಷೆ ಹೊಂದಿದ್ದರು. ಈ ಅಲೆಯ ಪರಿಣಾಮ, ಜನವರಿ ಅಥವಾ ಫೆಬ್ರವರಿಯಲ್ಲಿ ಸಾಕಷ್ಟು ಕಾಂಗ್ರೆಸ್ಸಿಗರು ಬಿಜೆಪಿ ಸೇರಿ, ಹೊಸ ಹುರುಪು ಮತ್ತು ಮತ್ತಷ್ಟು ಸಂಚಲನದೊಂದಿಗೆ ಬಿಜೆಪಿ ಬಲವಾಗುತ್ತದೆ ಎಂಬ ನಿರೀಕ್ಷೆ ಅಮಿತ್ ಶಾ ಅವರಿಗೂ ಇತ್ತು, ಸ್ಥಳೀಯ ಬಿಜೆಪಿ ನಾಯಕರಿಗೂ ಇತ್ತು. ಆದರೆ, ಬಿಜೆಪಿ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯದಿಂದ ಪರಿಸ್ಥಿತಿ ಅಂದುಕೊಂಡಷ್ಟು ಅನುಕೂಲಕರವಾಗಿಲ್ಲ ಎಂಬುದು ಅಮಿತ್ ಶಾ ಅವರಿಗೆ ಮನವರಿಕೆಯಾಯಿತು.

ಅಷ್ಟಾದರೂ ಅದನ್ನು ತೋರಿಸಿಕೊಳ್ಳದೇ ಅಮಿತ್ ಶಾ ಸಾಂಘಿಕ ಜಾಲವನ್ನು ಬಲಗೊಳಿಸುವ ಕಾರ್ಯ ಚುರುಕಗೊಳಿಸಿದರು. ಬೂತ್ ಮಟ್ಟಕ್ಕಿಂತ ಆಳಕ್ಕೆ ಹೋಗಿ, ಪನ್ನಾ ಪ್ರಮುಖ್ ಯೋಜನೆಯನ್ನು ಕರ್ನಾಟದಲ್ಲಿ ಜಾರಿಗೊಳಿಸಿದರು. ಇದು ಕರ್ನಾಟಕದ ಮಟ್ಟಿಗೆ ಹೊಸದು. ಕಾಂಗ್ರೆಸ್ ಇಷ್ಟು ಬುಡಮಟ್ಟದಲ್ಲಿ ಕಾರ್ಯಕರ್ತರ ಬಲ ಹೊಂದಿಲ್ಲ. ದೇಶದಲ್ಲಿ ಈಗಾಗಲೇ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಗೆದ್ದಿರುವ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟದಲ್ಲಿ ಸಂಘದ ಹಾಗೂ ಪಕ್ಷದ ಕಾರ್ಯಕರ್ತರ ಪಡೆ ಬಹಳ ಶಕ್ತಿಶಾಲಿಯಾಗಿದೆ.

ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಪ್ರವಾಹಗೊಳಿಸಿದರೆ ಹಾಗೂ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಪಕ್ಷದ ಬಲದಲ್ಲೇ ಅವರನ್ನು ಗೆಲ್ಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಅಮಿತ್ ಶಾ ಹಾಕಿದರು. ಆದರೆ, ಕರ್ನಾಟಕದಲ್ಲಿ ಪಕ್ಷದ ಹಾಗೂ ಕಾರ್ಯಕರ್ತರ ಪಡೆಯೂ ತಮ್ಮ ನಾಯಕರಂತೇ ಬೇರೆ ಬೇರೆ ಪಾಳಯಗಳಾಗಿ ಹೋಳಾಗಿರುವುದು ಗಮನಕ್ಕೆ ಬಂದ ನಂತರ ಮತ್ತೆ ಅಮಿತ್ ಶಾ ರಣತಂತ್ರ ಬದಲಿಸಿದ್ದಾರೆ.

ಅಭ್ಯರ್ಥಿ ಆಯ್ಕೆಯಲ್ಲಿ ಉತ್ತರ ಪ್ರದೇಶದಷ್ಟು ಹೊಸ ಪ್ರಯೋಗ ಮಾಡುವ ಬದಲು ಗೆಲ್ಲುವ ಕುದುರೆಗಳ ಮಾನದಂಡವನ್ನೇ ಆಧರಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸೂಕ್ತವಾದೀತು ಎಂಬ ನಿಲುವಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಸಾಕಷ್ಟು ಹಳೆಯ ಮುಖಗಳೇ ಮುಂದುವರಿಯುವ ಸಾಧ್ಯತೆ ಹೆಚ್ಚು. ಒಂದೊಂದು ಸೀಟೂ ಮುಖ್ಯವಾಗಿದ್ದು ಇದಕ್ಕೆ ಕರ್ನಾಟಕದ ಬಿಜೆಪಿ ನಾಯಕರಷ್ಟೇ ಸಂಖ್ಯೆಯಲ್ಲಿ ಉ.ಭಾರತದ ಕಾರ್ಯಕರ್ತರನ್ನೂ ಬಳಸಿಕೊಳ್ಳುತ್ತಿದ್ದಾರೆ.

click me!